ಜಿಲ್ಲೆ

ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಕಾರವಾರ: ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದ ಸಮೀಪ ಮಹಿಳೆಯೊಬ್ಬಳ ಮೃತದೇಹ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.,
ಕಿನ್ನರ ಮೂಲದ ಹಾಲಿ ನಗರದ ಬಾಂಡಿಶಿಟ್ಟಾದಲ್ಲಿ ವಾಸವಿದ್ದ ಸಂಜನಾ ಗಜಾನನ ತಳೇಕರ್(39) ಮೃತ ಮಹಿಳೆ. ಬುಧವಾರ ಬೆಳಗ್ಗೆ ಮಗಳನ್ನು ಶಾಲೆಗೆ ಬಿಟ್ಟ ಆಕೆ ಕೈಯ್ಯಲ್ಲಿ ಸೀಮೆ ಎಣ್ಣೆ ಕ್ಯಾನ್‌ನ್ನು ತನ್ನ ಜತೆ ಕೊಂಡೊಯ್ದಿದ್ದನ್ನು ಸ್ಥಳೀಯರು ನೋಡಿದ್ದಾರೆ. ನಂತರ ಪತಿ ಆಕೆಯ ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಶಿರವಾಡದಲ್ಲಿ ಗಿಡಗಂಟಿಗಳ ನಡುವೆ ಮೊಬೈಲ್ ಫೋನ್ ರಿಂಗ್ ಆಗುವುದನ್ನು ಕೇಳಿದ ಸ್ಥಳೀಯ ವ್ಯಕ್ತಿಯೊಬ್ಬರು ಹುಡುಕಾಟ ನಡೆಸಿದಾಗ ಮಹಿಳೆಯ ತಲೆ, ಬೆನ್ನಿನ ಭಾಗ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ. ಕೆಲ ದಿನಗಳಿಂದ ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು. ಚಿಕಿತ್ಸೆ ಕೊಡಿಸಿದ್ದೆ ಎಂದು ಪತಿ ಗಜಾನ  ತಳೇಕರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನ ಹೇಳಿಕೆ ಪಡೆದಿದ್ದಾರೆ.,11 ವರ್ಷದ ಪುತ್ರಿ ತಾಯಿ ಇಲ್ಲದ ತಬ್ಬಲಿಯಾಗಿದ್ದಾಳೆ. .ಪ್ರೀತಿಸಿ ಅಂತರ್ಜಾತಿಯ ವಿವಾಹವಾಗಿದ್ದ ಸಂಜನಾ ಹಾಗೂ ಗಜಾನನ ಶಹರಕ್ಕೆ ಬಂದು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಕಿನ್ನರದಲ್ಲಿ ಸ್ವಂತ ಮನೆ ಕಟ್ಟುತ್ತಿದ್ದರು.