ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ನಗರದ ಪುರಭವನದಲ್ಲಿ ಅಭಿನಂದನಾ ಸಮಾರಂಭ ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮ ಜರುಗಿತು. ವಿ.ಕೆ. ಗ್ರೂಫ್ ಆಫ್ ಕಂಪೆನೀಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ. ಶೆಟ್ಟಿ ಮದ್ಯಗುತ್ತು ಕಾರ್ಯಕ್ರಮ ಉದ್ಘಾಟಿಸಿದರು.
ನೂತನ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ.ಕೆ.ಪ್ರಕಾಶ್ ಶೆಟ್ಟಿ, ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಕರುಣಾಕರ ಶೆಟ್ಟಿ ಮದ್ಯಗುತ್ತು, ಲೆಫ್ಟಿನೆಂಟ್ ಸಾತ್ವಿಕ್ ರೈ ಕಾಸರಗೋಡು ಇವರುಗಳನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ‘ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ರಾಜಕೀಯದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಶ್ರೀಮಂತರು, ಪ್ರಭಾವಿಗಳು ಮಾತ್ರ ಸಂಸದರಾಗುವ ಕಾಲ ಬದಲಾಗಿ ಸಾಮಾನ್ಯ ಮನೆಯ
ನನ್ನಂತ ಯುವಕರಿಗೆ ಸಂಸತ್ ಪ್ರವೇಶಿಸುವ ಅವಕಾಶ ದೊರೆತಿದೆ. ಸಂಸತ್‌ನಲ್ಲಿ ಬಡ, ಮಧ್ಯಮ ವರ್ಗದವರ ಧ್ವನಿಯಾಗಿ, ವಿಕಸಿತ ದಕ್ಷಿಣ ಕನ್ನಡದ ಕನಸು ನನಸಾಗಿಸಲು ಕಟಿಬದ್ಧನಾಗಿದ್ದೇನೆ ಎಂದರು.
ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಭೂಮಸೂದೆ ಕಾನೂನಿನಲ್ಲಿ ಅತೀ ಹೆಚ್ಚು ಭೂಮಿ ಕಳೆದುಕೊಂಡವರು ಬಂಟ
ಸಮುದಾಯದವರು. ಆದರೆ ಅವರು ದೃತಿ ಗೆಡಲಿಲ್ಲ. ಹೊರ ರಾಜ್ಯ, ಹೊರ ದೇಶಗಳಿಗೆ ತೆರಳಿ ಸ್ವಂತ ಪರಿಶ್ರಮದಿಂದ ಅಲ್ಲಿ ಯಶಸ್ವಿ ಉದ್ಯಮಿಗಳಾಗಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ಸಮುದಾಯದ ಬಡ, ಮಧ್ಯಮ ವರ್ಗದವರಿಗೆ ಶಕ್ತಿ ತುಂಬಿದೆ ’ಎಂದರು.
ಡಾ.ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ ‘ ಅಶಕ್ತರು, ನೊಂದವರು ಸಂಕುಚಿತ ಮನೋಭಾವನೆ ಬಿಟ್ಟು ಹೊರಬನ್ನಿ. ನಾವು ದುಡಿದ ಒಂದಷ್ಟು
ಭಾಗವನ್ನು ಸಮಾಜಕ್ಕೆ ದಾನ ಮಾಡುತ್ತೇವೆ. ನಗರದ ಗೋಲ್ಡ್‌ಪಿಂಚ್ ಸಿಟಿಯಲ್ಲಿ ಬೃಹತ್ ಐಟಿ ಸಂಸ್ಥೆ ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು 60 ಸಾವಿರಕ್ಕೂ ಅಧಿಕ ಉದ್ಯೋಗ ಕಲ್ಪಿಸುವ ಯೋಜನೆ ಇದೆ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ರಾಜೇಶ್.ಎನ್.ಶೆಟ್ಟಿ, ಅರವಿಂದ್ ಆನಂದ್ ಶೆಟ್ಟಿ, ಬೆಳ್ಳಾಡಿ ಅಶೋಕ್ ಎಸ್. ಶೆಟ್ಟಿ, ಮುನಿಯಾಲ್ ಉದಯ ಕುಮಾರ್‌ಶೆಟ್ಟಿ, ಎ. ಸದಾನಂದ ಶೆಟ್ಟಿ, ಡಾ.ಪಿ.ವಿ. ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಇನ್ನಂಜೆ ಶಶಿಧರ್ ಶೆಟ್ಟಿ, ದಯಾಚರಣ್ ಶೆಟ್ಟಿ, ಶ್ರೀಧರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಆದರ್ಶ ಶೆಟ್ಟಿ, ಸುಧಾಕರ ಪೂಂಜ, ನಾಗೇಶ್ ಹೆಗ್ಡೆ, ಪುರುಷೋತ್ತಮ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಚಂದ್ರಹಾಸ. ಡಿ. ಶೆಟ್ಟಿ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ 1,312 ವಿದ್ಯಾರ್ಥಿಗಳಿಗೆ 1 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ಡಾ ಮಂಜುಳಾ ಶೆಟ್ಟಿ, ರಾಜೇಶ್ವರಿ ಡಿ ಶೆಟ್ಟಿ ಸುರತ್ಕಲ್, ಬಾಲಕೃಷ್ಣ ಆಳ್ವ ಕೊಡಾಜೆ, ಆರ್‌ಜೆ ನಯನ, ಭಾಗ್ಯರಾಜ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್, ನಿತೇಶ್ ಶೆಟ್ಟಿ ಎಕ್ಕಾರ್ ಮತ್ತು ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.