ಕೈಲಾಂಚ : ಕ್ಷೇತ್ರದ ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು ಮೊದಲ ಆದ್ಯತೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ, ಅಂಜನಾಪುರ ಗ್ರಾಪಂ ವತಿಯಿಂದ ಬಸವ ವಸತಿ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪುತ್ತಿವೆ. ಅಭಿವೃದ್ಧಿ ಸರ್ಕಾರದ ಮೂಲ ಮಂತ್ರವಾಗಿದೆ. ಶಾಸಕನಾಗಿ ಆಯ್ಕೆಯಾದ ಮೇಲೆ ಸರ್ಕಾರ ಕ್ಷೇತ್ರಕ್ಕೆ ಸುಮಾರು 700 ಕೋಟಿ ರೂ. ಅನುದಾನ ನೀಡಿದೆ. ಕಳೆದ 20 ವರ್ಷಗಳಿಂದ ಆಗದಿರುವ ಗ್ರಾಮೀಣ, ನಗರ ಪ್ರದೇಶದ ಅಭಿವೃದ್ಧಿ ಕೆಲಸಗಳಿಗೆ ಈಗ ವೇಗ ಸಿಕ್ಕಿದೆ. ಹಂತ ಹಂತವಾಗಿ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಸಾಗುತ್ತವೆ. ಕಸಬಾ ಕೈಲಾಂಚ ಹೋಬಳಿಯಲ್ಲಿ ಈಗಾಗಲೇ 50 ಕೋಟಿ ರೂ. ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ ಆಗಿದೆ. ಪ್ರಸ್ತುತ 20 ಕೋಟಿ ರೂ. ಅನುದಾನ ಬಂದಿದ್ದು, ಪ್ರತೀ ಗ್ರಾಪಂ ವ್ಯಾಪ್ತಿಯ ಕೆರೆ, ಕುಂಟೆ, ರಸ್ತೆ, ಚರಂಡಿ ಅಭಿವೃದ್ಧಿಗೆ ಅನುದಾನ ಬಳಸಲಾಗುತ್ತಿದೆ ಎಂದು ಹೇಳಿದರು.
ಬಸವ ವಸತಿ ಯೋಜನೆಯಲ್ಲಿ ಕ್ಷೇತ್ರಕ್ಕೆ ಮೂರು ಸಾವಿರ ಮನೆ ಮಂಜೂರಾಗಿದೆ. ಪ್ರತಿ ಗ್ರಾಪಂನಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.ರಾಮನಗರದ ನಗರ ಪ್ರದೇಶಕ್ಕೆ 24 ಗಂಟೆ ಕಾವೇರಿ ಕುಡಿಯುವ ಯೋಜನೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗಕ್ಕೂ ಕಾವೇರಿ ನೀರು ನೀಡಲು ಯೋಜನೆ ಕೆಲಸ ಪ್ರಗತಿಯಲ್ಲಿದೆ ಎಂದರು.
ಮಾಜಿ ಶಾಸಕ ಕೆ. ರಾಜು, ಗ್ರಾಪಂ ಅಧ್ಯಕ್ಷೆ ಸುನೀತಾ ನಾಗರಾಜ್ ಸಿಂಗ್ ಬಾಬು, ತಾಪಂ ಇಒ ಪ್ರದೀಪ್, ಗ್ಯಾರಂಟಿ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಎಚ್. ರಾಜು, ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ತಾಪಂ ಮಾಜಿ ಅಧ್ಯಕ್ಷ ಭದ್ರಯ್ಯ, ವಿಎಸ್‌ಎಸ್‌ಎನ್ ಅಧ್ಯಕ್ಷ ಪಾರ್ಥ, ಉಪಾಧ್ಯಕ್ಷ ಕುಮಾರಸ್ವಾಮಿ ಗ್ರಾಪಂ ಸದಸ್ಯರಾದ ಮಲ್ಲೇಶ್, ಜ್ಯೋತಿ, ಸಿದ್ದರಾಜು, ಮಹದೇವಮ್ಮ, ರಂಗಸ್ವಾಮಿ, ವೆಂಕಟೇಶ್, ಶ್ರೀನಿವಾಸ್, ವೆಂಕಟಪ್ಪ ಮುಖಂಡರಾದ ಸಿ.ಎನ್.ಆರ್.ವೆಂಕಟೇಶ್, ಗುರುವೇಗೌಡ, ಕೃಷ್ಣಪ್ಪ, ಶಿವಲಿಂಗಪ್ರಸಾದ್, ಉಮೇಶ್, ರಮೇಶ್, ಹರಳಪ್ಪ, ಮಹೇಶ್, ಪಿಡಿಓ ಬಿ.ಕೆ.ಗೋಮತಿ, ರಾಜಸ್ವ ನಿರೀಕ್ಷಕ ರಾಜಶೇಖರ್ ಬಿಲ್‌ಕಲೆಕ್ಟರ್ ರೇವುಮಲ್ಲೇಶ್ ಇದ್ದರು.
ವಿವಿಧ ಸಮಸ್ಯೆ ಪ್ರಸ್ತಾವನೆ : ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯ ಚೌಡೇಶ್ವರಿಪುರ, ಕುಂಭಾಪುರ ಕಾಲನಿ, ಚನ್ನಮಾನಹಳ್ಳಿ, ಚಿಕ್ಕೇನಹಳ್ಳಿ, ಅಂಜನಾಪುರ, ದೇವರದೊಡ್ಡಿ, ವಿಭೂತಿಕೆರೆ, ಹೊಸೂರುದೊಡ್ಡಿ, ಕಾವೇರಿದೊಡ್ಡಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು.
ಕುಂಭಾಪುರ ಕಾಲನಿಯಲ್ಲಿ ಅಂಗನವಾಡಿ ಕಟ್ಟಡ ಹಳೆಯದಾಗಿದ್ದು, ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿಸಿಕೊಡಬೇಕು, ಚನ್ನಮಾನಹಳ್ಳಿಯಲ್ಲಿ ಆಂಜನೇಯ ದೇವಾಲಯದ ಕಾಂಪೌಂಡ್ ಶಿಥಿಲವಾಗಿದ್ದು ಮಳೆ ಬಂದಾಗ ಬೀಳುತ್ತಿದೆ. ಹೊಸ ಕಾಂಪೌಂಡ್ ವ್ಯವಸ್ಥೆ ಮಾಡಿಸಬೇಕು, ಶಾಲಾ ಆವರಣಕ್ಕೆ ನೀರು ನುಗ್ಗುತ್ತಿದ್ದು, ಚರಂಡಿ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ನೀರು ಹೋಗುವ ವ್ಯವಸ್ಥೆ ಸರಿಪಡಿಸಲು ಕಾಮಗಾರಿಗೆ ಅನುದಾನ ಒದಗಿಸಬೇಕು ಎಂದು ಸಾರ್ವಜನಿಕರು ಶಾಸಕ ಇಕ್ಬಾಲ್ ಹುಸೇನ್ ಅವರಲ್ಲಿ ಮನವಿ ಮಾಡಿದರು.
ಕೆರೆ-ಕಟ್ಟೆ ತುಂಬಿದರೆ ರೈತರ ಬದುಕು ಹಸನಾಗಲು ಸಾಧ್ಯ.ಈ ಹಿನ್ನೆಲೆಯಲ್ಲಿ ಅಂತರ್ಜಲ ರಕ್ಷಣೆಗೆ, ಕೆರೆ ಕಟ್ಟೆ ಅಭಿವೃದ್ಧಿಗೆ ಅನುದಾನ ಬಳಸಲಾಗುತ್ತಿದೆ. ಇದರ ಜತೆಗೆ ಕೈಲಾಂಚ ಹೋಬಳಿಯ ಎಲ್ಲ ಕೆರೆ ತುಂಬಿಸುವ ಯೋಜನೆಗೆ ಒತ್ತು ನೀಡಲಾಗಿದೆ. ಜನರ ಸ್ವತ್ತುಗಳಿಗೆ ಇ ಖಾತೆಗಳು ಇಲ್ಲ. ಗ್ರಾಮ ಠಾಣಾ ವ್ಯಾಪ್ತಿ ಮತ್ತು ಅದರ ಹೊರಗಿರುವ ಮನೆಗಳಿಗೆ ದಾಖಲಾತಿ ಪರಿಶೀಲಿಸಿ, ಇ - ಸ್ವತ್ತು ಖಾತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜನರಿಗೆ ಉಪಯೋಗವಾಗಲಿದೆ. ಎಚ್.ಎ. ಇಕ್ಬಾಲ್ ಹುಸೇನ್, ಶಾಸಕ