ಬೂದಿಕೋಟೆ: ದಸರಾ ಹಾಗೂ ಜಂಬೂ ಸವಾರಿಯ ಅಂಗವಾಗಿ ಬೂದಿಕೋಟೆ ಗ್ರಾಮದಲ್ಲಿ ಭಾನುವಾರ ಎತ್ತಿನ ಬಂಡಿಗಳ ಓಟ ಹಾಗೂ ಮೆರವಣಿಗೆ ನಡೆಸಲಾಯಿತು. ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ಒಂಭತ್ತು ದಿನಗಳ ಕಾಲ ಗ್ರಾಮದ ವೆಂಕಟರಮಣಸ್ವಾಮಿ, ಗಂಗಮ್ಮ, ಕೋದಂಡರಾಮಸ್ವಾಮಿ ಸೇರಿ ಗ್ರಾಮದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ನಡೆಯಿತು.
ಭಾನುವಾರ ಸಂಪ್ರದಾಯದಂತೆ ಗ್ರಾಮದಲ್ಲಿನ ಎಲ್ಲ ಎತ್ತುಗಳು ಹಾಗೂ ಬಂಡಿಗಳಿಗೆ ಅಲಂಕಾರ ಮಾಡಿ, ಲಕ್ಷ್ಮಿವೆಂಕಟೇಶ್ವರ ದೇವಾಲಯದ ಬಳಿ ಎತ್ತಿನ ಬಂಡಿಗಳಿಗೆ ಪೂಜೆ ಸಲ್ಲಿಸಿ, ಉತ್ತಮ ಮಳೆ ಹಾಗೂ ಬೆಳೆಯಾಗಲಿ ಎಂದು ಗ್ರಾಮ ದೇವತೆಗಳಿಗೆ ಬೇಡಿಕೊಂಡರು. ತಾಪಂ ಮಾಜಿ ಸದಸ್ಯ ವಿ.ಮಾರ್ಕಂಡೇಗೌಡ ಮಾತನಾಡಿ, ಪ್ರತಿ ವರ್ಷ ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿ ದಿನದಂದು ಬೂದಿಕೋಟೆಯಲ್ಲಿ ರಾಸುಗಳಿಗೆ ಪೂಜೆ ಸಲ್ಲಿಸಿ ಬಂಡಿಗಳಿಗೆ ಅಲಂಕಾರ ಮಾಡಿ ಮೆರವಣಿಗೆ ಮಾಡುವುದು ಪದ್ಧತಿ. ಆದರೆ ಜಂಬೂ ಸವಾರಿ ಶನಿವಾರ ಬಂದಿರುವ ಕಾರಣ ಶನಿವಾರ ಕುರಿ ಬಲಿ ಕೊಡಬಾರದು ಎಂದು ಭಾನುವಾರ ಪೂಜೆ ನೆರವೇರಿಸಲಾಗಿದೆ. ಗ್ರಾಮದಲ್ಲಿ ಎಲ್ಲರೂ ಆರೋಗ್ಯದಿಂದಿದ್ದು, ಉತ್ತಮ ಮಳೆಯೊಂದಿಗೆ ಸುಖ ಸಮೃದ್ಧಿಯಿಂದ ಬದುಕಬೇಕು. ಈ ಸಂಪ್ರದಾಯವು ನಮ್ಮ ತಾತ ಮುತ್ತಾತಂದಿರ ಕಾಲದಿಂದ ಬಂದಿದ್ದು, ಇಂದು ನಾವುಗಳು
ಸಂಪ್ರದಾಯ ಬಿಡದೇ ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆ ತರುತ್ತದೆ. ಇಂತಹ ಹಬ್ಬಗಳು ಮಾಡುವುದರಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟು ಹೆಚ್ಚಾಗುವುದರ ಜತೆಗೆ ಜಾತಿ ಬೇಧ ಮರೆತು ಎಲ್ಲರೂ ಸಂತಸದಿಂದ ಹಬ್ಬ ಆಚರಣೆ ಮಾಡುತ್ತಾರೆ. ಈ ಸಂಪ್ರದಾಯ ಮುಂದಿನ ತಲೆಮಾರು ಮುಂದುವರೆಸಿಕೊಂಡು ಹೋಗಬೇಕು ಎಂದರು.