ಜಿಲ್ಲೆ

ವಿದ್ಯುತ್ ಪ್ರವಹಿಸಿ ಉಳುಮೆ ಮಾಡುತ್ತಿದ್ದ ಎತ್ತು ಸಾವು

ಸವಣೂರ: ಹೊಲದಲ್ಲಿ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಪರಿವರ್ತಕ (ಟಿಸಿ)ದ ಕಂಬಕ್ಕೆ ಆಸರೆಯಾಗಿ ನಿಲ್ಲಿಸಿದ್ದ ತಂತಿ ತಾಗಿ ಎತ್ತು ಮೃತಪಟ್ಟ ಘಟನೆ ತಾಲೂಕಿನ ಗುಂಡೂರು ಗ್ರಾಮದ ಹೊರವಲಯದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ರೈತ ಚನ್ನಬಸಪ್ಪ ಭೀಮಪ್ಪ ಕೆಮ್ಮನಕೇರಿ ಅವರಿಗೆ ಸೇರಿದ ಎತ್ತು ಮೃತಪಟ್ಟಿದೆ. ಒಂದು ವರ್ಷದ ಹಿಂದೆ ರೈತ ಚನ್ನಬಸಪ್ಪ 1.5 ಲಕ್ಷ ರೂ. ಸಾಲ ಮಾಡಿ ಎತ್ತುಗಳನ್ನು ಖರೀದಿಸಿದ್ದರು.

ಮುಂಗಾರು ಹಂಗಾಮಿನ ಬಿತ್ತನೆಗಾಗಿ ಭೂಮಿ ಹದ ಮಾಡುವ ವೇಳೆ ತಮ್ಮ ಜಮೀನಿನಲ್ಲಿದ್ದ ಟಿಸಿಯಲ್ಲಿ ಪರಿವರ್ತಕದ ಕಂಬಕ್ಕೆ ಆಸರೆಯಾಗಿ ಕಟ್ಟಿದ ತಂತಿಗೆ ವಿದ್ಯುತ್ ಪ್ರವಹಿಸಿದ್ದರಿಂದ ಎತ್ತಿನ ಕಾಲಿಗೆ ತಾಗಿ ಸ್ಥಳದಲ್ಲೇ ಮೃತಪಟ್ಟಿದೆ.

ಸ್ಥಳಕ್ಕೆ ಹೆಸ್ಕಾಂ ಪ್ರಭಾರ ಎಇಇ ದೇವರಾಜ ಅವರಡ್ಡಿ, ಎಸ್‌ಒ ಆರ್.ಎಫ್. ನದಾಫ್, ಲೈನ್‌ಮನ್ ಎಸ್.ಎನ್. ಪಾಟೀಲ, ಜೂನಿಯರ್ ಲೈನ್‌ಮನ್ ಧನಂಜಯ ಎನ್., ಆಸೀಫ್ ಕಿಲ್ಲೇದಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಹೆಸ್ಕಾಂ ಅಧಿಕಾರಿಗಳು, ವಿದ್ಯುತ್ ಪರಿವರ್ತಕದಲ್ಲಿ ಯಾವುದೇ ಲೋಪದೋಷ ಕಂಡು ಬಂದಿಲ್ಲ. ಆದರೆ, ಟಿಸಿಗೆ ಹಾಕಿದ ವಿದ್ಯುತ್ ಭೂ ಸಂಪರ್ಕ (ಗ್ರೌಂಡ) ಉಂಟಾಗಿ ಈ ಘಟನೆ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗುತ್ತಿದೆ.

ತನಿಖೆ ನಂತರ ಎತ್ತುನ್ನು ಕಳೆದುಕೊಂಡ ರೈತನಿಗೆ ಪರಿಹಾರ ನೀಡಲು ಇಲಾಖೆ ಮೇಲಧಿಕಾರಿಗಳಿಗೆ ಶಿಪಾರಸು ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.