ಜಿಲ್ಲೆ

ದೆಹಲಿಯಿಂದ ನನಗೂ ಬಂದಿದೆ ಬುಲಾವ್ ! ಆದರೂ ಯಾರಿಗೂ ಹೆದರಲ್ಲ-ಯಾವುದಕ್ಕೂ ಬಗ್ಗಲ್ಲ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ‘ನನಗೂ ದೆಹಲಿಯಿಂದ ಬುಲಾವ್ ಬಂದಿದೆ...ಆದರೆ, ನಾನು ಯಾವುದಕ್ಕೂ ಹೆದರುವುದಿಲ್ಲ, ಯಾರಿಗೂ ಬಗ್ಗಲ್ಲ....ಈವರೆಗೆ ಮಾತನಾಡಿದ ಮಾತುಗಳಲ್ಲಿನ ಒಂದೇ ಒಂದು ಪದ ವಾಪಸ್ ತೆಗೆದುಕೊಳ್ಳಲ್ಲ, ನನ್ನ ಬಗ್ಗೆ ಏನು ದೂರು ಕೊಡುತ್ತಾರೋ ಕೊಡಲಿ...ಭ್ರಷ್ಟಾಚಾರ ಆರೋಪವಿದ್ದರೆ ಆ ಕುರಿತ ದೂರು ಸಹ ಕೊಡಲಿ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಪಕ್ಷದ ವಿರುದ್ಧ ಹರಿಹಾಯ್ದರು.

ನಾನೆಲ್ಲೂ ವಿಜಯೇಂದ್ರ ಹಾಗೂ ಪಕ್ಷದ ವಿರುದ್ಧ ಮಾತನಾಡಿಲ್ಲ. ಆದರೂ ಸದಾನಂದಗೌಡರು ಅಷ್ಟೇಕೆ ಗಾಬರಿಯಾಗಿದ್ದಾರೆ? ಈ ಹಿಂದೆ ಸದಾನಂದ ಗೌಡರು ಸಹ ಯಡಿಯೂರಪ್ಪ ಕುಟುಂಬದ ಬಗ್ಗೆ ಬಹಳ ಕಟ್ಟದಾಗಿ ಮಾತನಾಡಿದ್ದಾರೆ. ನಾನು ಸಹ ಅಷ್ಟು ಕಟ್ಟದಾಗಿ ಮಾತನಾಡಿಲ್ಲ. ಅದೆಲ್ಲ ಬಿಚ್ಚಿಟ್ಟರೆ ಸದಾನಂದಗೌಡರ ಬಣ್ಣ ಬಯಲಾಗಲಿದೆ. ಸುಮ್ಮನೆ ಬಾಯಿ ಮುಚ್ಚಿಕೊಂಡು ಕೂರಬೇಕು ಎಂದು ಗುರುವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದೇನೆ ಹೊರತು ನಾನೇನು ರಾಜ್ಯಾಧ್ಯಕ್ಷನಾಗಬೇಕು, ಸಿಎಂ ಆಗಬೇಕೆಂದು ಹೋರಾಟ ಮಾಡುತ್ತಿಲ್ಲ. ಆದರೂ ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ ಎಂದು ಯಾರೋ ಹೇಳಿದ್ದಾರೆ. ಆದರೆ ನಾನು ಆರಿ ಹೋದ ದೀಪದ ಬಗ್ಗೆ ಮಾತನಾಡಲ್ಲ. ಅವರ ದೀಪವೇ ಆರಿ ಹೋಗಿದೆ ಎಂದ ವಾಗ್ದಾಳಿ ನಡೆಸಿದ ಯತ್ನಾಳ, ಎರೆಹುಳುಗಳೆಲ್ಲ ನಾಗರಹಾವು ಆಗಲು ಸಾಧ್ಯವಿಲ್ಲ ಎಂದಿರುವ ಕುರಿತು ಸದಾನಂದಗೌಡರ ವಿರುದ್ಧ ಹರಿಹಾಯುತ್ತಾ ‘ನಾಗರಹಾವಿಗೂ ಎರೆ ಹುಳುವಿಗೂ ಎತ್ತಣಿಂದೆತ್ತ ಸಂಬಂಧವಯ್ಯ, ನಿನ್ನ ಮಾತು, ಕೃತಿಗೂ ಎತ್ತಣಿಂದೆತ್ತ ಸಂಬಂಧವಯ್ಯ ಸದಾನಂದ’ ಎಂದರಲ್ಲದೇ ಇದು ನನ್ನ ಹೊಸ ಕೂಡಲ ಸಂಗಮವಾಣಿ ಎಂದರು.

ಇನ್ನು ಬಿ.ಸಿ. ಪಾಟೀಲ ಬಗ್ಗೆ ಮಾತನಾಡುತ್ತಾ, ಸದನದಲ್ಲಿ ನಾವು ಹೋರಾಟ ಮಾಡುತ್ತಿದ್ದರೆ ಇವರೆಲ್ಲ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಬಳಿ ತೆರಳಿ 20 ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುತ್ತಿದ್ದರು ಎಂದು ಲೇವಡಿ ಮಾಡಿದರು.

ದೆಹಲಿಗೆ ಬುಲಾವ್

‘ನನಗೂ ನಿನ್ನೆ ದೆಹಲಿಯಿಂದ ಫೋನ್ ಬಂದಿದೆ. ತಕ್ಷಣ ಹೊರಟು ಬನ್ನಿ ಎಂದಿದ್ದಾರೆ. ನಾನೇನು ಬರಲ್ಲ ಎಂದಿದ್ದೇನೆ. ನಾನೊಂದು ಟೀಮ್ ಮಾಡಿದ್ದು ಇಡೀ ಟೀಮ್ ಭ್ರಷ್ಟಾಚಾರ ಹಾಗೂ ವಕ್ಫ್ ವಿರುದ್ಧ ಹೋರಾಡುತ್ತಿದ್ದೇವೆ. ಆ ಟೀಮ್‌ನ ಎಲ್ಲರನ್ನೂ ದೆಹಲಿಗೆ ಕರೆಯಿಸಿ. ನಿಜ ಸ್ಥಿತಿ ಬಿಚ್ಚಿಡುವೆ. ಒಬ್ಬನನ್ನೇ ಕರೆಯಿಸಿ ಆಗ ಬಂದು ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲವನ್ನೂ ಬಿಚ್ಚಿಡುವೆ’ ಎಂದು ತಿಳಿಸಿದ್ದಾಗಿ ಯತ್ನಾಳ ಹೇಳಿದರು.

ವಂಶವಾದ, ಭ್ರಷ್ಟಾಚಾರ ತೊಲಗಿಸುವ ಭಯ ಕೆಲವರಿಗೆ ಕಾಡುತ್ತಿದೆ. ಪ್ರಧಾನಿ ಮೋದಿ ಅವರೇ ವಂಶವಾದ ಅಳಿಸುವುದಾಗಿ ಹೇಳಿದ್ದಾರೆ. ಆ ಬಗ್ಗೆ ನಾವು ಪ್ರಧಾನಿಗೆ ಒತ್ತಾಯಿಸುತ್ತೇವೆ. ಮಾತೆತ್ತಿದ್ದರೆ ಪಕ್ಷಕ್ಕಾಗಿ ದುಡಿದಿದ್ದೇವೆ, ಸೈಕಲ್ ಮೇಲೆ ಅಡ್ಡಾಡಿದ್ದೇವೆ ಎನ್ನುತ್ತಾರೆ. ನಾವೂ ಸಹ ಅಡ್ಡಾಡಿ ಪಕ್ಷ ಕಟ್ಟಿದ್ದೇವೆ. ಇವರಿಗೆಲ್ಲ ಪಕ್ಷ ಸಾಕಷ್ಟು ಅವಕಾಶ ಕೊಟ್ಟಿದೆಯಲ್ಲ, ಸಿಎಂ ಆಗಿದ್ದಾರೆ, ಪುತ್ರನಿಗೆ ಸಂಸದ ಮಾಡಿದ್ದಾರೆ...ಹೀಗೆ ಅನೇಕ ಅವಕಾಶ ಕೊಡಲಾಗಿದೆಯಲ್ಲ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಬಗ್ಗೆ ಇಲ್ಲ ಸಲ್ಲದ ಕಥೆ ಕಟ್ಟುತ್ತಿದ್ದಾರೆ. ನಾನು ಈವರೆಗೆ ಸಿದ್ದರಾಮಯ್ಯ ಅವರ ಮುಖ ನೋಡಿಲ್ಲ, ಸದನದಲ್ಲಿ ಬಿಟ್ಟು ಸಿದ್ದರಾಮಯ್ಯ ಅವರನ್ನು ನೋಡಿಲ್ಲ. ಸಿದ್ದರಾಮಯ್ಯ, ಡಿಕೆಶಿ ಮನೆಗೆ ಕಾಲಿಟ್ಟಿಲ್ಲ. ಏನಾದರೂ ಮಾಡಿ ಎಂದು ಅಂಗಲಾಚಿಲ್ಲ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಆದರೆ, ಇವರೆಲ್ಲ ಭೇಟಿಯಾಗುತ್ತಾರೆ ಎಂದು ಸ್ವಪಕ್ಷೀಯರ ಬಗ್ಗೆ ಕಿಡಿಕಾರಿದರು.

ಅವಮಾನ ಆಗಿಲ್ಲ-ಹೋರಾಟಕ್ಕೆ ಹಿನ್ನಡೆಯಾಗಿಲ್ಲ

ವಕ್ಫ್ ವಿರುದ್ಧದ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕಲಬುರಗಿ, ಬೀದರ್, ರಾಯಚೂರಿನಲ್ಲಿ ಸಾಕಷ್ಟು ಜನ ಸೇರಿದ್ದಾರೆ. ಕೆಲವೆಡೆ ನಮ್ಮ ವಿರುದ್ಧ ಧಿಕ್ಕಾರ ಕೂಗಲು ಹುಡುಗರನ್ನು ಕಳುಹಿಸುತ್ತಿದ್ದಾರೆ. ಆದರೆ, ಸೇರಿದ ಜನವೇ ಆ ಹುಡುಗರಿಗೆ ತಕ್ಕ ಶಾಸ್ತಿ ಮಾಡಿ ಕಳುಹಿಸಿದ್ದಾರೆ. ನನ್ನ ಮೇಲೆ 39 ಕೇಸ್ ಹಾಕಿದ್ದಾರೆ. ನನ್ನ ಪರ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತಿದೆ. ಹೀಗಾಗಿ ಇಡೀ ರಾಜ್ಯದ ಜನವೇ ನನ್ನ ಹಿಂದೆ ಇದ್ದಾರೆ. ಯತ್ನಾಳರಿಗೆ ಕೈ ಹಚ್ಚಿದರೆ ಯಾರೂ ಬಿಡಲ್ಲ ಎಂದರು.

ಸದನದಲ್ಲೂ ಹೋರಾಟ

ವಕ್ಫ್‌ಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಹೋರಾಟ ಮಾಡಲಾಗುವುದು. ಜೊತೆಗೆ ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆಯೂ ಧ್ವನಿ ಎತ್ತುವೆ. ಕಾಂಗ್ರೆಸ್ ಹಗರಣ ಬಯಲು ಮಾಡುವೆ ಎಂದ ಯತ್ನಾಳ, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಅಕ್ಕಾ ಈ ಮೊದಲು ಎಷ್ಟು ಜಿಗಿದಾಡುತ್ತಿದ್ದರು? ಈಗ ರಾಜೀನಾಮೆ ಕೊಡಲಿ ನೋಡೋಣ? ಒಬ್ಬರೇ ಒಬ್ಬ ಕಾಂಗ್ರೆಸ್ ನಾಯಕ ಬಾಯಿ ಬಿಡುತ್ತಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೇರಿದಂತೆ ಕಾಂಗ್ರೆಸ್‌ನ ಪಂಚಮಸಾಲಿ ಸಮುದಾಯದ ನಾಯಕರ ಬಗ್ಗೆ ಕಿಡಿಕಾರಿದರು. ಜೊತೆಗೆ ತಾವು ಮಾತ್ರ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.