ವೈ.ಎನ್.ಹೊಸಕೋಟೆ: ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಹೋಬಳಿ ಹನುಮಂತನಹಳ್ಳಿಯ ಬಡಗಿ ತಿಮ್ಮರಾಯಪ್ಪ ಎಂಬುವವರ ಮನೆಯಲ್ಲಿ ಬುಕ್ಕರಾಯರ ಕಾಲಕ್ಕೆ ಸಂಬಂಧಿಸಿದ ತಾಮ್ರ ಶಾಸನ ಪತ್ತೆಯಾಗಿದೆ.
ಸ್ಥಳಿಯ ಜಾನಪದ ಕಲಾವಿದ ಟಿ.ಎ.ಶಿವಣ್ಣ ಸಹಕಾರದಿಂದ ಇತಿಹಾಸ ಸಂಶೋಧಕ ಹೊ.ಮ.ನಾಗರಾಜು ಶಾಸನ ಪತ್ತೆಹಚ್ಚಿದ್ದಾರೆ. ಅಷ್ಟಾವಧಾನಿ ಗುರುವೇಪಲ್ಲಿ ನರಸಿಂಹುಲು ಸಹಕಾರದಿಂದ ಶಾಸನ ಓದಲಾಗಿದ್ದು, ಗೌರಿಬಿದನೂರು ತಾಲೂಕಿನಲ್ಲಿರುವ ನಗರಗೆರೆ ಗ್ರಾಮದ ರಚನೆಯ ವಿಷಯ ಒಳಗೊಂಡಿದೆ.
ಶಾಸನ ಫಲಕ 12 ಇಂಚು ಎತ್ತರ 6 ಇಂಚು ಅಗಲವಿದೆ. ತಾಮ್ರದ ಹಲಗೆಯ ಎರಡು ಬದಿಗಳ ಮೇಲೆ ಶಾಸನ ಕೆತ್ತಲಾಗಿದ್ದು, 80 ಸಾಲುಗಳಿವೆ. ಅಕ್ಷರಗಳು ಕನ್ನಡ ಲಿಪಿಯಾಗಿದ್ದು, ತೆಲುಗು ಭಾಷೆ ಒಳಗೊಂಡ ಶಾಸನ ಇದಾಗಿದೆ. ಗ್ರಾಮಕ್ಕೆ ರಾಮದೇವರು ದಯಮಾಡಿದಾಗ
ಬರೆದ ರುಜುವು ಎಂದು ಶಾಸನದ ಪ್ರಾರಂಭದ ಸಾಲುಗಳಲ್ಲಿ ತಿಳಿಸಲಾಗಿದೆ.
ಶಾಸನದಲ್ಲಿ ಶಾಸನ ರಚನಾ ಕಾಲ ಲಭ್ಯವಿರುವುದಿಲ್ಲ, ನಿಡಗಲ್ಲು, ಹೊಸಕೋಟೆ ಹರತಿ ಪಾಳೇಗಾರರ ಮೂಲಪುರುಷನಾದ ಆನೆಗೊಂದಿಯ ತಿಪ್ಪನಾಯಕನು ಶಾಲಿ ಶಕ 1157ರಲ್ಲಿ ಬಹಾದ್ದೂರ್ ಮಲ್ಲಿಕನ ಮೇಲೆ ಯುದ್ಧ ಮಾಡಿ ಗೆದ್ದ ಎಂಬ ಉಲ್ಲೇಖವಿದೆ. ಇದರೊಟ್ಟಿಗೆ ಶಾಸನದಲ್ಲಿ ಬರುವ ಮಾನ್ಯಗಳ ಅಳತೆಯನ್ನು ವಿಜಯನಗರ ಕಾಲದ ನಾಣ್ಯಗಳಾದ ರಾಮ ಟಂಕಿಗಳು, ದುರ್ಗಿಗಳು
ಮತ್ತು ಪುತಳಿಗಳಿಗಳಿಂದ ಗುರ್ತಿಸಲಾಗಿದೆ.
ಆದಾಗಿ ಈ ಶಾಸನವು ವಿಜಯನಗರ ಕಾಲಘಟ್ಟದ ಶಾಸನವೆಂದು ತಿಳಿಯಬಹುದು. ಶಾಸನ ಪಾಠಾಂಶದಲ್ಲಿ ಅಕ್ಷರ ಮತ್ತು ಕಾಗುಣಿತ ದೋಷಗಳು ಬಹಳಷ್ಟಿದ್ದು ವಾಕ್ಯ ಜೋಡಣೆಯು ಅಲ್ಲಲ್ಲಿ ಅಸ್ಪಷ್ಟವಾಗಿದೆ. ಆದಾಗಿ ಮೇಲ್ನೋಟಕ್ಕೆ ಇದೊಂದು ಕೂಟ ಶಾಸನವೆಂಬಂತೆ ಕಂಡುಬರುತ್ತಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ನಗರಿಗೆರಿ ತಾಮ್ರ ಶಾಸನದಲ್ಲಿ ಏನಿದೆ?: ವೃಷಭ ಪತಿಗಾ ತೆಲಿಸಿತಿ ಎಂಬ ಬೀಜಾಕ್ಷರಗಳುಳ್ಳ ಮೂರು ಪಟ್ಟಿಯ ಚೌಕಟ್ಟಿನೊಂದಿಗೆ ಪ್ರಾರಂಭವಾಗುವ ಶಾಸನ ನಗರಿಗೆರಿ ತಾಮ್ರ ಶಾಸನ ಎಂಬ ತಲೆಬರಹ ಹೊಂದಿದೆ. ವಿಜಯನಗರದ ಅರಸ ಬುಕ್ಕಭೂಪತಿರಾಯರ ಆಜ್ಞೆಯಂತೆ ಎಮ್ಮೇಲೋರು ಗೋತ್ರದ ಆನೆಗೊಂದಿ ತಿಪ್ಪನಾಯಕನು ಬಹಾದ್ದೂರ್ ಮಲ್ಲಿಕನನ್ನು ಸೋಲಿಸಿ ರಾಯರಿಂದ ಬಹುಮತಿ ಮತ್ತು ಬಳುವಳಿ ಪಡೆಯುತ್ತಾನೆ. ನಂತರದ ಕಾಲಘಟ್ಟದಲ್ಲಿ ಆತನ ಸಂತತಿಯವರು ಗೂಟೂರು ಎಂಬಲ್ಲಿ ನೆಲೆ ನಿಂತಿದ್ದಾಗ ಸಮೀಪದ ಪೆನಗೊಂಡಗು ಮತ್ತು ಸೋಮಪುರಿ ಪಟ್ಟಣಕ್ಕೂ ಯುದ್ಧ ಸಂಭವಿಸಿ ಅಲ್ಲಿದ್ದ ತಿಪ್ಪನಾಯಕನ ವಂಶಜರು ಸೋಮಪುರಿ ಪಟ್ಟಣವನ್ನು ಪೆನಗೊಂಡೆ ರಾಯರಿಗೆ ಗೆದ್ದುಕೊಡುತ್ತಾರೆ. ಅದಕ್ಕೆ ಪ್ರತಿಫಲವಾಗಿ ರಾಯರು ಅವರಿಗೆ ನಾರಸೀಮೆಯಲ್ಲಿ ಊರುಗಳನ್ನು ಕಟ್ಟಲು ಅನುಮತಿ ನೀಡುತ್ತಾರೆ.
ಅದರಂತೆ ಅವರು ನಾರಸೀಮೆಯ ಮಲೆಯನ್ನು ಕಡಿದು ಊರನ್ನು ಕಟ್ಟುತ್ತಾರೆ. ಅದನ್ನು "12 ಅರ್ರಕೂಟ 10' ಎಂದು ಗುರುತಿಸಿದ್ದಾರೆ. ಅಲ್ಲಿ ಕೆರೆ ಮತ್ತು ದೇವಾಲಯಗಳ ಕಟ್ಟುತ್ತಾರೆ. ನಂತರ ಪೆದ್ದತಿಮ್ಮಳನಾಯಕ ಮತ್ತು ತಿರುಮಲ ನಾಯಕರು ಪರಿವಾರ ಸಮೇತರಾಗಿ ತಿರುಮಲಕ್ಕೆ ಹೋಗಿ ಸ್ವಾಮಿಯನ್ನು ಕರೆತಂದು ಕರ್ಕಾಟಕ ಲಗ್ನದಲ್ಲಿ ಗ್ರಾಮಕ್ಕೆ "ಅಳ್ಳೂರು' ಎಂತಲೂ ಪ್ರತಿನಾಮ "ನಗರಿಗೆರಿ' ಎಂತಲೂ ನಾಮಕರಣ ಮಾಡಿಸುತ್ತಾರೆ. ಗ್ರಾಮಕ್ಕೆ ಸರಹದ್ದುಗಳನ್ನು ಗುರುತಿಸಿ ಆಯಗಾರರನ್ನು ನೇಮಿಸಿ ತಾಮ್ರ ಶಾಸನ ರಚಿಸಿ ನಗರಿಗೆರಿ ಹನುಮಂತರಾಯ ದೇವಾಲಯದಲ್ಲಿ ಅಂಕೆ ಕೊಂಡಪುನಾಯಕನಿಗೆ ನೀಡುತ್ತಾರೆ. ಇದಕ್ಕೆ ಹನ್ನೆರಡು ಜನ ಆಯಗಾರರು ಒಪ್ಪುತ್ತಾರೆ ಎಂದು ತಿಳಿಸುತ್ತಾ ಶಾಸನ ಕೊನೆಗೊಳ್ಳುತ್ತದೆ. ಶಾಸನವೂ ಬುಕ್ಕಭೂಪತಿರಾಯರ ಬಿರುದಾವಳಿಗಳು ಸೋಮಪುರಿ ಪಟ್ಟಣದ ಮೇಲೆ ಯುದ್ಧ ಮಾಡಿದವರು, ಗ್ರಾಮದ 12 ಜನ ಆಯಗಾರರು, ಅವರಿಗೆ ಕೊಟ್ಟ ಮಾನ್ಯದ ಭಾಗಗಳು, ಗ್ರಾಮದಲ್ಲಿ ಕಟ್ಟಿದ ದೇವಾಲಯಗಳು, ತಿಪ್ಪನಾಯಕನ ಸಂತತಿ, ಶಾಸನಗಳನ್ನು ಹಾಕಿಸಿದ ಸ್ಥಳಗಳ ಮಾಹಿತಿಯನ್ನು ಒಳಗೊಂಡಿದೆ ಎನ್ನಲಾಗಿದೆ.
"ನಗರಿಗೆರಿ ತಾಮ್ರ ಶಾಸನ ನಮಗೆ ಪಿತ್ರಾರ್ಜಿತವಾಗಿ ಬಂದಿದೆ. ತಿರುಪತಿ ತಿಮ್ಮಪ್ಪನ ಪ್ರತಿರೂಪವೆಂದು ನಾವು ಭಾವಿಸಿದ್ದು, ತಲೆಮಾರುಗಳ ಕಾಲದಿಂದ ಶ್ರದ್ಧಾಭಕ್ತಿಗಳಿಂದ ಪೂಜೆ ಮಾಡುತ್ತಿದ್ದೇವೆ. ಆದಾಗಿ ಮತ್ತೊಬ್ಬರಿಗೆ ತೋರಿಸುವ ಅಥವಾ ಮುಟ್ಟುವ ಅವಕಾಶ ಕೊಡುವುದಿಲ್ಲ."
- ಅನಿಲ್ ಹನುಮಂತನಹಳ್ಳಿ