ಕಾರ್ಕಳ: ಉತ್ತಮ ಫಲಿತಾಂಶದ ಮೂಲಕ ಜ್ಞಾನಸುಧಾ ಸಂಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ. ಶಿಕ್ಷಣದ ಜೊತೆಯಲ್ಲಿ ದೇಶ ಪ್ರೇಮಿಗಳನ್ನು ನಿರ್ಮಿಸುತ್ತಿರುವ ಕಾರ್ಯ ಪ್ರಶಂಸನೀಯವಾದುದು ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಮೊದಲ ಹಂತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಸುನಿಲ್‌ಕುವಾರ್ ವಾತನಾಡಿ, ಮಕ್ಕಳಿಗೆ ಮೌಲ್ಯ ಹಾಗೂ ಸಂಸ್ಕಾರ ನೀಡುವಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಬಹಳ ದೊಡ್ಡ ಹೆಜ್ಜೆಯನ್ನಿಡುತ್ತಿದೆ. ಶಿಕ್ಷಣದ ಜೊತೆಗೆ ಬದುಕಿಗೆ ಬೇಕಾದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವಲ್ಲಿ ಜ್ಞಾನಸುಧಾ ಅಗ್ರ ಪಂಕ್ತಿಯಲ್ಲಿದೆ ಎಂದರು.
ಮಂಗಳೂರು ವಿ.ವಿ ಉಪಕುಲಪತಿ ಪ್ರೊ.ಡಾ.ಪಿ.ಎಲ್.ಧರ್ಮ ವಾತನಾಡಿ ಯುವ ಮನಸುಗಳಲ್ಲಿ ದೇಶ ಪ್ರೇಮವನ್ನು ತುಂಬುವ ಕಾರ್ಯದ ಜೊತೆಗೆ, ಜ್ಞಾನಸುಧಾ ಪರಿವಾರ ಅತ್ಯುತ್ತಮ ನಾಗರಿಕರನ್ನು ಸವಾಜಕ್ಕೆ ಕೊಡುಗೆಯಾಗಿ ನೀಡುವ ಕಾರ್ಯದಲ್ಲಿ ತನ್ನನ್ನು ಅರ್ಪಿಸಿಕೊಂಡಿದೆ ಎಂದರು.
ಹತ್ತು ವರ್ಷಗಳ ಸೇವೆ ಪೂರ್ಣಗೊಳಿಸಿದ 10 ಮಂದಿ ಬೋಧಕ ಬೋಧಕೇತರ ಸಿಬ್ಬಂದಿಗೆ ತಲಾ 10 ಸಾವಿರ ರೂ. ನಿಶ್ಚಿತ ಠೇವಣಿ ನೀಡಲಾಯಿತು. ದೇವಸ್ಥಾನದ ಸೇವೆಯಲ್ಲಿ ತೊಡಗಿಸಿಕೊಂಡ ಭಗೀರಥ ಭಟ್ ಮತ್ತು ವಿಷ್ಣುಮೂರ್ತಿ ಭಟ್ ಹಾಗೂ ಶ್ರೀ ಮಹಾಗಣಪತಿ ದೇವಾಸ್ಥಾನ ಭಜನಾ ಮಂಡಳಿ ಅಧ್ಯಕ್ಷ ಕಮಲಾಕ್ಷ ನಾಯಕ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. 2011 ರಿಂದ 2025ರವರಗೆ ಜ್ಞಾನಸುಧಾ ಬೆಳೆದು ಬಂದ ದಾರಿಯ ಹೊತ್ತಗೆ ‘ಅಗಣಿತಸುಧಾಸ್ಪರ್ಷ’ ಹಾಗೂ ಜ್ಞಾನಸುಧಾ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಪ್ರತಿಭಾ ಪುರಸ್ಕಾರ: ಅಜೆಕಾರ್ ಪದ್ಮಗೋಪಾಲ್‌ಎಜುಕೇಶನ್ ಟ್ರಸ್ಟ್ ವತಿಯಿಂದ 2024-25ರ ವಾರ್ಷಿಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ 64 ಲಕ್ಷದ 22 ಸಾವಿರ ರೂ., ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 18 ಲಕ್ಷದ 78 ಸಾವಿರ ರೂ., ಸಂಸ್ಥೆಯ ಉದ್ಯೋಗಿಗಳ ಮಕ್ಕಳ ಉಚಿತ ಶಿಕ್ಷಣಕ್ಕೆ 14 ಲಕ್ಷದ 87 ಸಾವಿರ ರೂ., ಇಲಾಖಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಸುವ ಪ್ರತೀ ನೂರು ಅಂಕಗಳಿಗೆ ವಿದ್ಯಾರ್ಥಿಗೆ ಹಾಗೂ ಉಪನ್ಯಾಸಕರಿಗೆ ತಲಾ 1 ಸಾವಿರ ರೂ.ನಂತೆ 7 ಲಕ್ಷದ 21 ಸಾವಿರ ರೂ. ಸೇರಿದಂತೆ ಒಟ್ಟು 1 ಕೋಟಿ 5 ಲಕ್ಷ ರೂ.ನಷ್ಟು ವಿದ್ಯಾರ್ಥಿ ವೇತನ ಹಸ್ತಾಂತರಿಸಲಾಯಿತು.
ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಸಂಗೀತಾ ಕುಲಾಲ್ ನಿರೂಪಿಸಿ, ವಂದಿಸಿದರು.
ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನಲೆಯಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವತಿಯಿಂದ 2 ಲಕ್ಷ ರೂ. ಮೊತ್ತವನ್ನು ಭಾರತೀಯ ಸೇನೆಗೆ ದೇಣಿಗೆಯಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಹಸ್ತಾಂತರಿಸಲಾಯಿತು.
ಎಸ್‌ಎಸ್‌ಎಲ್‌ಸಿಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಗಳಿಸಿದ ಸ್ವಸ್ತಿ ಕಾಮತ್‌ಗೆ ಟ್ರಸ್ಟ್ ವತಿಯಿಂದ 2 ಲಕ್ಷ ರೂ. ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕೆಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ‌್ಯಾಂಕ್ ಗಳಿಸಿದ ತರುಣ್ ಸುರಾನ, ಜೆ.ಇ.ಇ ಮೈನ್ ಬಿ.ಪ್ಲಾನಿಂಗ್ ವಿಭಾಗದಲ್ಲಿ 99.9855627 ಪರ್ಸಂಟೈಲ್ ಪಡೆದು ಜನರಲ್ ವಿಭಾಗದಲ್ಲಿ 6ನೇ ಹಾಗೂ ಇ.ಡಬ್ಲು.ಎಸ್ ವರ್ಗದಲ್ಲಿ 1ನೇ ರ‌್ಯಾಂಕ್ ಮತ್ತು ಬಿ.ಆರ್ಕ್ ವಿಭಾಗದಲ್ಲಿ 99.8881752 ಪರ್ಸಂಟೈಲ್ (ಗಣಿತಶಾಸ್ತ್ರದಲ್ಲಿ 100 ಪರ್ಸಂಟೈಲ್) ಪಡೆದು ಇ.ಡಬ್ಲು.ಎಸ್. ವರ್ಗದಲ್ಲಿ 6ನೇ ಮತ್ತು ಜನರಲ್ ಮೆರಿಟ್ ವಿಭಾಗದಲ್ಲಿ 83ನೇ ರ‌್ಯಾಂಕ್ ಪಡೆದ ಮನೋಜ್ ಕಾಮತ್ ಹಾಗೂ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಸಾಧಕರನ್ನು ಅಭಿನಂದಿಸಲಾಯಿತು.