ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕೊಪ್ಪಳದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಸಿನ್‌ಗೆ ಮನವಿ ಸಲ್ಲಿಸಿದರು.ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಸಂಘಟನಾ ಸಂಚಾಲಕ ತುಕಾರಾಮ ಪಾತ್ರೋಟಿ, ಮುನೀರ್ ಸಿದ್ದಿಕಿ, ಜಾಕೀರ ಹುಸೇನ್ ಕಿಲ್ಲೆದಾರ ಇದ್ದರು.  
ಜಿಲ್ಲೆ

ಕಾರ್ಮಿಕ ಇಲಾಖೆ ಅಕ್ರಮ ತನಿಖೆಯಾಗಲಿ

ಕೊಪ್ಪಳ:ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಬಹು ಕೋಟಿ ರೂ. ಹಗರಣ ನಡೆದಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಸಿನ್‌ಗೆ ಮನವಿ ಸಲ್ಲಿಸಿದರು.

ಕಾರ್ಮಿಕರ ಹೆಸರಿನಲ್ಲಿ ಅನೇಕ ಕಿಟ್‌ಗಳನ್ನು ನೀಡಿದ್ದು, ಇದರಲ್ಲಿ ಹಗರಣ ನಡೆದಿದೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಿಲ್ಲ. ವಿವಾಹ ಪ್ರೋತ್ಸಾಹ ಧನವೂ ಬಂದಿಲ್ಲ. 2023-24ನೇ ಸಾಲಿನಲ್ಲಿ ಶಿಷ್ಯವೇತನ ಅರ್ಜಿ ಆಹ್ವಾನಿಸಿಲ್ಲ.

ವಸತಿ, ನಿವೇಶನ ಹೆಸರಿನಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆಯುತ್ತಿದ್ದು, ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ನಕಲಿ ಕಾರ್ಮಿಕ ಚೀಟಿಗಳನ್ನು ರದ್ದುಪಡಿಸಬೇಕು. ಸೇವಾಸಿಂಧು ಬದಲು ಕಾರ್ಮಿಕ ಇಲಾಖೆಯಿಂದಲೇ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ಸಹಾಯಧನ ಬಿಡುಗಡೆ, ಹೊಸದಾಗಿ ಅರ್ಜಿ ಆಹ್ವಾನಿಸಬೇಕು.

ಕಿಟ್ ಹಾಗೂ ವಸತಿ, ನಿವೇಶನ ಹೆಸರಿನಲ್ಲಿ ನಡೆದ ಅವ್ಯವಹಾರಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಯಾವುದೇ ಯೋಜನೆಗಳಿದ್ದರೂ ನೇರವಾಗಿ ಕಾರ್ಮಿಕರಿಗೆ ತಲುಪಿಸಬೇಕು. ಮದುವೆ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸುವಂತೆ ಒತ್ತಾಯಿಸಿದರು.

ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಸಂಘಟನಾ ಸಂಚಾಲಕ ತುಕಾರಾಮ ಪಾತ್ರೋಟಿ, ಮುನೀರ್ ಸಿದ್ದಿಕಿ, ಜಾಕೀರ ಹುಸೇನ್ ಕಿಲ್ಲೆದಾರ ಇತರರಿದ್ದರು.