ಹಟ್ಟಿಚಿನ್ನದಗಣಿ: ಭವ್ಯ ಕಟ್ಟಡಗಳ ನಿರ್ಮಾಣದ ಮೂಲಕ ಸುಂದರ ಸಮಾಜ ಕಟ್ಟುತ್ತಿರುವ ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ಸಿಐಟಿಯು ರಾಜ್ಯ ಜಂಟಿ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ ಹೇಳಿದರು.
ಪಟ್ಟಣದ ಪೈ ಭವನದಲ್ಲಿ ಸಿಐಟಿಯು ಆಯೋಜಿಸಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ 2ನೇ ತಾಲೂಕು ಸಮ್ಮೇಳನದಲ್ಲಿ ಮಂಗಳವಾರ ಮಾತನಾಡಿದರು. ಕೋವಿಡ್ ಸಮಯದಲ್ಲಿ ಕೆಲ ಕಟ್ಟಡ ಕಾರ್ಮಿಕರ ಬದುಕು ಬೀದಿ ಪಾಲಾಗಿತ್ತು.
ಈ ವೇಳೆ ಸರ್ಕಾರ ಸರಿಯಾದ ನೆರವು ನೀಡಲಿಲ್ಲ. ಕೆಕೆಆರ್‌ಡಿಬಿಯಿಂದ ಕೆಲ ಸೌಲಭ್ಯಗಳು ನೀಡಲಾಯಿತು. ಕೇಂದ್ರ ಸರ್ಕಾರ ಕಾರ್ಮಿಕ ವರ್ಗದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಇದರ ವಿರುದ್ಧ ಜು.9ರಂದು ದೇಶಾದ್ಯಂತ ಕಾರ್ಮಿಕರ ಮುಷ್ಕರ ನಡೆಸಲು ಕಾರ್ಮಿಕರ ಸಂಘಗಳು ನಿರ್ಧರಿಸಿದ್ದು, ಲಿಂಗಸುಗೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಸಿಐಟಿಯು ಹಟ್ಟಿ ಘಟಕದ ಅಧ್ಯಕ್ಷ ಫಕೃದ್ದೀನ್, ಪ್ರಮುಖರಾದ ರಮೇಶ ವೀರಾಪುರ, ಹನೀಫ್, ವನಜಾಕ್ಷಿ, ವೆಂಕಟೇಶ, ಪೆಂಚಲಯ್ಯ, ಸಾಹಿರಾ ಬೇಗಂ, ರಜಿಯಾ ಬೇಗಂ, ನಿಂಗಪ್ಪ ವೀರಾಪುರ ಇತರರಿದ್ದರು.