ಜಿಲ್ಲೆ

ಅಧಿಕಾರಿಗಳಿಂದ ಕಟ್ಟಡ ಪರಿಶೀಲನೆ

Gadag

ವಿಜಯವಾಣಿ ಸುದ್ದಿಜಾಲ ಗಜೇಂದ್ರಗಡ

ಪ್ರಸಕ್ತ ವರ್ಷದ ಏಪ್ರಿಲ್​ನಿಂದ ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಕಾರ್ಯಾರಂಭ ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದ್ದರಿಂದ ತಾ.ಪಂ. ಇಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಶುಕ್ರವಾರ ಪಟ್ಟಣದ ವಿವಿಧೆಡೆ ತಾ.ಪಂ. ಕಚೇರಿಗಾಗಿ ವಿವಿಧ ಕಟ್ಟಡಗಳನ್ನು ಪರಿಶೀಲಿಸಿದರು.

ತಾ.ಪಂ. ಇಒ ಸಂತೋಷ ಪಾಟೀಲ ಮಾತನಾಡಿ, ಹೊಸದಾಗಿ ರಚನೆಯಾದ ತಾಲೂಕು ಕೇಂದ್ರಗಳಿಗೆ ಈಗಾಗಲೇ ರಾಜ್ಯ ಸರ್ಕಾರ ಇಒಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಹೀಗಾಗಿ, ಪಟ್ಟಣದಲ್ಲಿ ಆರಂಭವಾಗಬೇಕಿರುವ ತಾಲೂಕು ಪಂಚಾಯಿತಿ ಕಚೇರಿಗೆ ಸೂಕ್ತ ಕಟ್ಟಡಕ್ಕಾಗಿ ಸ್ಥಳೀಯ ಸರ್ಕಾರಿ ಪಿಯು ಕಾಲೇಜ್, ಹಿರೇಮನಿ ಹಾಗೂ ಗಾಳಿ ಅವರ ವಾಣಿಜ್ಯ ಕಟ್ಟಡಗಳನ್ನು ಪರಿಶೀಲಿಸಲಾಗಿದೆ. ಕೆಲ ದಿನಗಳಲ್ಲಿ ಕಚೇರಿಗೆ ಸೂಕ್ತ ಎನಿಸುವ ಕಟ್ಟಡವನ್ನು ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ ಎಂದರು.

ಬಿಜೆಪಿ ಮುಖಂಡ ಮಹಾಂತೇಶ ಪೂಜಾರ ಮಾತನಾಡಿ, ಗಜೇಂದ್ರಗಡ ಪಟ್ಟಣದಲ್ಲಿ ಈಗಾಗಲೇ ತಹಸೀಲ್ದಾರ್ ಕಚೇರಿ ಆರಂಭವಾಗಿದೆ. ಹೀಗಾಗಿ, ತಾಲೂಕು ಪಂಚಾಯಿತಿ ಸೇರಿ ವಿವಿಧ ಇಲಾಖೆ ಹಾಗೂ ಕಚೇರಿಗಳನ್ನು ಆರಂಭಿಸಲು ಈಗಾಗಲೇ ಕೆಲ ಇಲಾಖೆಗಳು ಸ್ವಂತ ಕಟ್ಟಡ ನಿರ್ಮಾಣ ಅಥವಾ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ಆರಂಭಿಸಲು ಸರ್ಕಾರಿ ಹಾಗೂ ಖಾಸಗಿ ಸ್ಥಳಗಳನ್ನು ವೀಕ್ಷಿಸಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಆರಂಭವಾಗಲಿರುವ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಈ ಭಾಗದ ತಾ.ಪಂ. 6 ಸದಸ್ಯರು, ಜಿ.ಪಂ. 2 ಸದಸ್ಯರು ಸೇರಿ ಗೋಗೇರಿ, ಕುಂಟೋಜಿ, ರಾಂಪುರ, ರಾಜೂರು, ಲಕ್ಕಲಕಟ್ಟಿ, ಮುಶಿಗೇರಿ, ಶಾಂತಗೇರಿ, ಸೂಡಿ, ನಿಡಗುಂದಿ, ಹಾಲಕೇರಿ, ಗುಳಗುಳಿ ಸೇರಿ 11 ಗ್ರಾಮ ಪಂಚಾಯಿತಿಗಳು ಗಜೇಂದ್ರಗಡ ತಾ.ಪಂ ವ್ಯಾಪ್ತಿಯಲ್ಲಿ ಬರಲಿವೆ ಎಂದರು. ತಾ.ಪಂ. ಸದಸ್ಯ ಎಸ್.ಎಸ್. ಹೂಗಾರ, ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ, ಗಣೇಶ ಕೊಡಕೇರಿ ಇತರರಿದ್ದರು.