ಜಿಲ್ಲೆ

ವ್ಯಕ್ತಿತ್ವದಿಂದ ಭವಿಷ್ಯ ನಿರ್ಮಾಣ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮಗೆ ವ್ಯಕ್ತಿ ಮುಖ್ಯವಲ್ಲ. ವ್ಯಕ್ತಿತ್ವ ಮುಖ್ಯ. ವ್ಯಕ್ತಿಗೆ ಬೆಲೆ ಕೊಡುವುದಕ್ಕಿಂತ ಅವನಲ್ಲಿರುವ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು ಎಂದು ನಿವೃತ್ತ ಶಿಕ್ಷಕ ವೀರಣ್ಣ ಒಡ್ಡೀನ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ತಾಲೂಕಿನ ಕರಡಿಗುಡ್ಡದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ವ್ಯಕ್ತಿತ್ವ ವಿಕಸನ ಕುರಿತು ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವವು ಒಳ್ಳೆ ಭವಿಷ್ಯ ನಿರ್ಮಿಸುತ್ತದೆ. ಶಾಲಾ ಹಂತದಲ್ಲಿ ಧನಾತ್ಮಕ ಚಿಂತನೆ ಆತ್ಮ ವಿಶ್ವಾಸ, ಪ್ರಾಮಾಣಿಕತೆ ಹಿತಮಿತವಾದ ಮಾತುಗಾರಿಕೆ ತಾಳ್ಮೆಯ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಬದುಕು ಸುಂದರವಾಗುತ್ತದೆ. ಅಂತಹ ಬದುಕೇ ಸಾರ್ಥಕ ಬದುಕು. ಜೀವನದಲ್ಲಿ ಬದುಕಿನ ಅವಧಿ ಮುಖ್ಯವಾಗಬಾರದು. ಹೇಗೆ ಬದುಕಿದೆವು ಎಂಬುದು ಮುಖ್ಯ ಎಂದರು.
ಪ್ರೊ. ಧನವಂತ ಹಾಜವಗೋಳ ಮಾತನಾಡಿ, ವ್ಯಕ್ತಿತ್ವ ವಿಕಾಸಕ್ಕೆ ಭಾಷೆಯೂ ಮುಖ್ಯ. ವಿದ್ಯಾರ್ಥಿಗಳು ಭಾಷಾ ಪ್ರಭುತ್ವ ಹೊಂದಿದರೆ ವ್ಯಕ್ತಿತ್ವಕ್ಕೆ ಮೆರಗು ಬರುತ್ತದೆ. ಬದುಕು ಸುಂದರವಾಗುತ್ತದೆ. ಭಾಷೆ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವ ಕೌಶಲ ಉತ್ತಮ ಪಡಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಪ್ರೊ. ನಂದೀಶ ಕಾಖಂಡಕಿ ಮಾತನಾಡಿ, ವಿದ್ಯಾರ್ಥಿಗಳ ಶಬ್ದ ಬಳಕೆ ಮೇಲೆ ಅವರ ವ್ಯಕ್ತಿತ್ವ ರೂಪಗೊಳ್ಳುತ್ತದೆ. ವ್ಯಕ್ತಿತ್ವದಿಂದ ಮಾತ್ರ ಸಮಾಜದಲ್ಲಿ ಒಳ್ಳೆ ಗೌರವ ನಿಮಗೆ ಸಿಗುತ್ತದೆ ಎಂದರು.
ಕಾಲೇಜಿನ ಸಿಬಿಸಿ ಉಪಾಧ್ಯಕ್ಷ ಮಹಾಬಳೇಶ್ವರ ಸಂಗಪ್ಪನವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪನ್ಯಾಸಕ ಮಂಜುನಾಥ ಮುದಕಪ್ಪನವರ, ಪುಷ್ಪಾ ಐರಸಂಗ, ಇತರರು ಇದ್ದರು.
ಪ್ರಕಾಶ ಸೋಜಾ ಸ್ವಾಗತಿಸಿದರು. ಪ್ರಕಾಶ ಸುಣಗಾರ ನಿರೂಪಿಸಿದರು. ಮಾರುತಿ ಪೂಜಾರಿ ವಂದಿಸಿದರು.