ಮಂಡ್ಯ: ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಮಾಲೀಕರ ವಿರೋಧದ ನಡುವೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ 8 ಕಟ್ಟಡಗಳನ್ನು ತೆರವು ಮಾಡಿದರು. ನಾಲ್ಕು ವಾಣಿಜ್ಯ ಕಟ್ಟಡ ಹಾಗೂ ನಾಲ್ಕು ಮನೆಗಳನ್ನು ಜೆಸಿಬಿ ಯಂತ್ರದ ಮೂಲಕ ಉರುಳಿಸಲಾಯಿತು.
ಬೆಂಗಳೂರು-ಮೈಸೂರು ಹೆದ್ದಾರಿಗಾಗಿ ಗ್ರಾಮದಲ್ಲಿ ಕೆಲವರ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಪೈಕಿ ಕೆಲವರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎನ್ನುವ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಹಲವು ದಿನದಿಂದ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ಜಟಾಪಟಿ ನಡೆಯುತ್ತಿತ್ತು.
ಕೆಲ ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಪರಿಹಾರ ಕೊಟ್ಟ ಬಳಿಕ ತೆರವು ಕಾರ್ಯಾಚರಣೆ ಮಾಡುವಂತೆ ಸೂಚನೆ ನೀಡಿದ್ದರು.
ಅದರಂತೆ ಸುಮ್ಮನಿದ್ದ ಅಧಿಕಾರಿಗಳು ಸೋಮವಾರ ಮುಂಜಾನೆಯೇ ಜೆಸಿಬಿ ಯಂತ್ರದೊಂದಿಗೆ ಆಗಮಿಸಿದ್ದರು. ರಕ್ಷಣೆಗೆಂದು ಪೊಲೀಸರನ್ನು ಕರೆಸಿಕೊಂಡಿದ್ದರು. ಈ ವೇಳೆ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪದ ಹಂತಕ್ಕೆ ತಲುಪಿತು. ಈ ಸಂದರ್ಭದಲ್ಲಿ ಪೊಲೀಸರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಸಿದ್ದೇಗೌಡ, ಇಂಡುವಾಳು ಬಸವರಾಜು ಸೇರಿದಂತೆ ಹಲವರನ್ನು ಬಂಧಿಸಿ ಕರೆದೊಯ್ದರು. ಇತ್ತ ಪೊಲೀಸರ ರಕ್ಷಣೆಯಲ್ಲಿ ಕಟ್ಟಡವನ್ನು ತೆರವುಗೊಳಿಸಿದರು. ಠಾಣೆಗೆ ಕರೆದುಕೊಂಡು ಬಂದಿದ್ದ ಪ್ರತಿಭಟನಾಕಾರರನ್ನು ಕೆಲ ಸಮಯದ ಬಳಿಕ ಬಿಡುಗಡೆ ಮಾಡಲಾಯಿತು.