ಜಿಲ್ಲೆ

ಪಂಚ ಗ್ಯಾರಂಟಿಗಳಿಂದ ಸಮ ಸಮಾಜ ನಿರ್ಮಾಣ

ರವಿ ಎಸ್. ಬಳೂಟಗಿ

ರೋಣ: ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪಾತ್ರ ಮಹತ್ತರವಾಗಿದೆ. ಬಡ ಮತ್ತು ಮಧ್ಯಮ ವರ್ಗದವರ ಜೀವನದಲ್ಲಿ ಯೋಜನೆ ಸಂತೋಷ ತಂದಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರೋಣ ತಾಲೂಕು ಅಧ್ಯಕ್ಷ ಸಂಗನಗೌಡ ಜಿ. ಪಾಟೀಲ ಹೇಳಿದರು.

ತಾಲೂಕಿನ ಅಬ್ಬಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕ ಸಬಲೀಕರಣದತ್ತ ತೆಗೆದುಕೊಂಡು ಹೋಗಲಾಗಿದೆ. ಹಸಿವುಮುಕ್ತ ಕರ್ನಾಟಕ ಮಾಡುವ ದೃಢ ಸಂಕಲ್ಪದಿಂದ ಪ್ರತಿಯೊಬ್ಬ ಪಡಿತರದಾರರಿಗೆ ತಲಾ 10 ಕೆ.ಜಿ. ಆಹಾರ ಧಾನ್ಯ ಒದಗಿಸಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಿಂದ ಉಚಿತ ಬೆಳಕು ನೀಡಿ ಸುಸ್ಥಿರ ಬದುಕನ್ನು ನಡೆಸಲು ಸಹಕಾರಿಯಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ನಿಜವಾದ ಶಕ್ತಿ ಬಂದಿದೆ. ಯುವನಿಧಿಯಡಿ ನೋಂದಣಿಯಾದ ಯುವಜನತೆಗೆ ಹಣ ನೀಡಲಾಗುತ್ತಿದೆ ಎಂದು ಹೇಳಿದರು.

ತಾಪಂ ಇಒ ಚಂದ್ರಶೇಖರ ಕಂದಕೂರ ಮಾತನಾಡಿ, ಗ್ಯಾರಂಟಿಗಳ ಮೂಲಕ ಸಾಮಾನ್ಯರಿಗೆ ಸ್ವಾಭಿಮಾನದ ಬದುಕು ಕೊಡುವಲ್ಲಿ ಯಶಸ್ವಿಯಾಗಿದೆ. ಸಮ ಸಮಾಜ ನಿರ್ಮಾಣದ ಜತೆಗೆ ಆರ್ಥಿಕವಾಗಿ ಸಮಾನತೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ರಾಠೋಡ, ಸುರೇಶ ಬಸವರೆಡ್ಡರ, ಹನುಮಂತ ದ್ವಾಸಲ್, ಬಸವರಾಜ ತಳವಾರ, ಪಿಡಿಒ ಎಂ. ಲೋಹಿತ, ಜ್ಯೋತಿ ತೆಗ್ಗಿನಕೆರಿ, ಹನುಮಂತಪ್ಪ ದೂತಾಯಪ್ಪ ದ್ವಾಸಲ್, ಆನಂದಪ್ಪ ಹಿರೇಮನಿ, ಸುಶೀಲವ್ವ ಐಹೊಳೆ, ರೇಖಾ ಅವರಡ್ಡಿ, ವಿಜಯಲಕ್ಷ್ಮೀ ಬಸವರೆಡ್ಡೇರ, ಚನ್ನವ್ವ ತಳವಾರ, ಬಸಪ್ಪ ಕಮ್ಮಾರ, ಗೀತಾ ಬಾವಿಮನಿ, ಬಿಬಿಜಾನ ಅನಗವಾಡಿ, ದುರ್ಗಪ್ಪ ಮಾದರ, ಅಕ್ಕಮಹಾದೇವಿ ಇಟಗಿ ಭಾಗವಹಿಸಿದ್ದರು.