ಸರಗೂರು: ಪೂರ್ವಕಾಲದ ಪುಣ್ಯ, ಗುರು ಹಿರಿಯರ ಆಶೀರ್ವಾದ ಇದ್ದರೆ ಮಾತ್ರ ದೇವಸ್ಥಾನ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವ ಅವಕಾಶ ಲಭಿಸಲು ಸಾಧ್ಯವೆಂದು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ಪಟ್ಟಣದ 10ನೇ ವಾರ್ಡಿನಲ್ಲಿರುವ ಅಂತರಘಟ್ಟಮ್ಮ ದೇವಸ್ಥಾನದ ನೂತನ ಶಿಲಾ ದೇಗುಲ ಉದ್ಘಾಟನೆ ಹಾಗೂ ಜೀರ್ಣೋದ್ಧಾರದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸ್ಥಳೀಯ ಅಂತರಘಟ್ಟಮ್ಮ ಭಕ್ತ ಸಮೂಹ ನೂತನ ಶಿಲಾ ದೇಗುಲ ನಿರ್ಮಿಸಿ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿರುವುದು ಒಳ್ಳೆಯ ಕಾರ್ಯ ಎಂದರು.
ಭಾನುವಾರ ಬೆಳಗ್ಗೆ ನವಗ್ರಹ ಹೋಮ, ಪವಮಾನ ಹೋಮ, ಪಂಚಾಕ್ಷರಿ ಹೋಮ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ 8ಕ್ಕೆ ಶ್ರೀಅಂತರಘಟ್ಟಮ್ಮ, ನಂದಿಮೂರ್ತಿ ಹಾಗೂ ನಾಗದೇವರ ಪ್ರತಿಷ್ಠಾಪನೆ ನಡೆಯಿತು. ಮಹಾಪೂಜೆ, ಅನ್ನಪೂಜೆ ಹಾಗೂ ಕಳಸಾರೋಹಣ ಸಮಾರಂಭ ಜರುಗಿತು. ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಅನಿಲ್ ಚಿಕ್ಕಮಾದು, ತಾಯಿ ನಾಗಮ್ಮ ಅವರು ದೇವಿಯ ದರ್ಶನ ಪಡೆದರು.
ಉಪ್ಪಾರ ಸಮಾಜದ ಟೌನ್ ಯಜಮಾನ ಮಲ್ಲೇಶ್, ನಾಯಕ ಸಮಾಜ ಯಜಮಾನ ಬೆಟ್ಟನಾಯಕ, ಮಂಜು ಆಚಾರ್, ಗುಡಿಗೌಡ ಗಣೇಶ, ಈಡಿಗ ಸಮಾಜದ ಯಜಮಾನ ಟಿ.ಕರಿಯಯ್ಯ, ಗಾಣಿಗ ಸಮಾಜದ ಭೈರನಾಯಕ, ಲಕ್ಷಣನಾಯಕ, ಶಿವಲಿಂಗ ಶೆಟ್ಟಿ, ವೆಂಕಟರಾಮು, ವಿಶ್ವಕರ್ಮ ಸಮಾಜದ ಯಜಮಾನ ಕೃಷ್ಣಾಚಾರ್, ಲಿಂಗಾಚಾರ್, ಲಿಂಗಾಯತ ಸಮುದಾಯದ ಯಜಮಾನ ಶ್ರೀಕಂಠ, ಮಡಿವಾಳ ಸಮಾಜದ ಯಜಮಾನ ನಂಜಶೆಟ್ಟಿ, ಇನ್ನಿತರ ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.