ಯಲ್ಲಾಪುರ: ನಮಗೆ ಎದುರಾಗುವ ತೊಂದರೆ, ತಾಪತ್ರಯಗಳೇ ನಮ್ಮ ಜಾಗೃತಿಗೆ ಕಾರಣವಾಗಿ, ದೇವಾಲಯಗಳ ನಿರ್ಮಾಣಕ್ಕೂ ಕಾರಣವಾಗುತ್ತದೆ ಎಂದು ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ರಾಮಪ್ಪ ಹೇಳಿದರು.
ತಾಲೂಕಿನ ಭರಣಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವರ್ಧಂತಿ ಉತ್ಸವದ ಸಮಾರೋಪದಲ್ಲಿ ಧರ್ಮಸಭೆಯನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಜೀವನದಲ್ಲಿ ಕೇವಲ ಶ್ರೀಮಂತಿಕೆ ಇದ್ದರೂ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ನಿಷ್ಪ್ರಯೋಜಕ. ಆದ್ದರಿಂದಲೇ ನಮ್ಮ ಹಿರಿಯರು ದೇವಾಲಯಗಳ ನಿರ್ವಣದಿಂದ ಶಾಂತಿ, ಸಮಾಧಾನ ದೊರೆಯುತ್ತದೆ ಎಂಬುದನ್ನು ಅರಿತಿದ್ದರು ಎಂದರು.
ಧಾರ್ವಿುಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದ ನರಸಿಂಹ ಭಟ್ಟ ಮಾತನಾಡಿ, ವಿವೇಕ, ವಿನಯ, ಸದ್ವಿಚಾರ, ತಾಳ್ಮೆ ಹಾಗೂ ಜಾಣ್ಮೆಗಳ ಧರ್ಮ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ವಿಶ್ವನಾಥ ದೇವಸ್ಥಾನದ ಧರ್ಮದರ್ಶಿ ಎ.ಜಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕನ್ನೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಆರ್.ಡಿ. ನಾಯ್ಕ, ಸಾಗರದ ಹೊಗೆವಡ್ಡಿಯ ಧರ್ಮದರ್ಶಿ ಅನಂತ ನಾಯ್ಕ, ಶಿರಸಿಯ ನಾಮಧಾರಿ ಅಭಿವೃದ್ಧಿ ಸಂಘದ ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿದರು. ಸುವರ್ಣಾ ನಾಯ್ಕ, ಇತರರು ಉಪಸ್ಥಿತರಿದ್ದರು.
ಮಂಜೇಶ ನಾಯ್ಕ, ಶಿಕ್ಷಕ ನಾರಾಯಣ ಶೇರೂಗಾರ ಹಾಗೂ ರತ್ನಾಕರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ವರ್ಧಂತಿ ಉತ್ಸವದ ಪ್ರಯುಕ್ತ ಪ್ರತಿದಿನ ಧಾರ್ವಿುಕ ಕಾರ್ಯಕ್ರಮಗಳು, ಭಜನೆ, ಭರತನಾಟ್ಯ, ಯಕ್ಷ ನೃತ್ಯ, ಡೊಳ್ಳು ಕುಣಿತ, ಡಮಾಮಿ ನೃತ್ಯ, ಕೀರ್ತನೆಗಳು ಪ್ರಸ್ತುತಗೊಂಡವು.