ಮೈಸೂರು: ಗಾಂಧಿ ಆಶಯಗಳು, ಜೀವನ ಮೌಲ್ಯಗಳ ಅಳವಡಿಕೆಯಿಂದ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಸಾಹಿತಿ ಡಾ.ಸಿ.ನಾಗಣ್ಣ ಹೇಳಿದರು.
ಶ್ರೀನಟರಾಜ ಪ್ರತಿಷ್ಠಾನದಿಂದ ಶ್ರೀನಟರಾಜ ಕಾಲೇಜಿನಲ್ಲಿ ಶನಿವಾರ ಮಹಾತ್ಮಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ‘ದೃಷ್ಟಿಯಲ್ಲಿ ಜೀವನ ಕಲೆ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ಮಾತನಾಡಿ, ಶ್ರೀಮಂತರು ತಮ್ಮಲ್ಲಿರುವ ಸಂಪತ್ತನ್ನು ಶೋಷಿತ ಸಮುದಾಯಗಳಿಗೆ ಹಂಚುವ ಕೆಲಸ ಮಾಡಬೇಕು. ದುಂದು ವೆಚ್ಚ ಮಾಡಬಾರದು. ವಕೀಲರು ನ್ಯಾಯಪರವಾಗಿ ವೃತ್ತಿ ನಿರ್ವಹಿಸಬೇಕು. ಸೇವಾ ಮನೋಭಾವದಲ್ಲಿ ವೈದ್ಯರು ತಮ್ಮ ಕೆಲಸ ಮಾಡಬೇಕು ಎನ್ನುವ ಆಶಯವನ್ನು ಗಾಂಧಿ ಹೊಂದಿದ್ದರು ಎಂದರು.
ಈ ಆಶಯದಲ್ಲಿ ಸಮಾಜವನ್ನು ಕಟ್ಟಿದಾಗ ತಾರತಮ್ಯ ಬರುವುದಿಲ್ಲ. ಇದರ ಮೂಲಕ ಸುಸ್ಥಿರ ಸಮಾಜ ನಿರ್ಮಾಣವಾಗಿ ರಾಮರಾಜ್ಯದ ಕನಸು ನನಸಲಾಗುತ್ತದೆ ಎಂದು ಹೇಳಿದರು.
ಮಹಿಳೆಯನ್ನು ದ್ವಿತೀಯ ದರ್ಜೆ ಪ್ರಜೆಯಂತೆ ಕಾಣಬಾರದು. ಪುರುಷರ ಅಧೀನದಲ್ಲಿ ಮಹಿಳೆ ಇರಬಾರದು. ಮಹಿಳೆಯರಿಗೆ ಶಿಕ್ಷಣ ಕೊಡಬೇಕು. ವಿವಾಹ ಎನ್ನುವುದು ಕೇವಲ ಲೈಂಗಿಕ ತೃಷೆ ಅಲ್ಲ. ಗಂಡು-ಹೆಣ್ಣಿನ ನಡುವೆ ಉನ್ನತ ಸ್ನೇಹ ಸಂಬಂಧಕ್ಕೆ ಮದುವೆ ಆಗಬೇಕು. ಆದರೆ ಪ್ರಸ್ತುತ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ವಾತ್ಸಲ್ಯ ಶಿಕ್ಷಣ ವಿದ್ಯಾಲಯದ ಶೈಕ್ಷಣಿಕ ಸಂಯೋಜಕ ಪ್ರೊ.ಎಂ.ಆರ್.ಜಯಪ್ರಕಾಶ್ ಮಾತನಾಡಿ, ಲಾಲ್ ಬಹಾದೂರ್ ಶಾಸ್ತ್ರಿ ಹಾಗೂ ಗಾಂಧೀಜಿ ಅವರ ತತ್ವ, ವಿಚಾರ, ಮಾರ್ಗದರ್ಶನದಂತೆ ನಾವು ನಡೆದರೆ ನಮ್ಮ ಜೀವನ ಉಜ್ವಲವಾಗಲು ಸಾಧ್ಯ ಎಂಬ ಸಂದೇಶವನ್ನು ತಿಳಿಸಿದರು.
ವಾತ್ಸಲ್ಯ ಶಿಕ್ಷಣ ವಿದ್ಯಾಲಯದ ಪ್ರಾಂಶುಪಾಲ ಡಾ.ಮಹೇಶ್ ದಳಪತಿ ಮಾತನಾಡಿ, ಗಾಂಧೀಜಿ, ಲಾಲ್ ಬಹಾದೂರ್ ಶಾಸ್ತ್ರಿ ಮತ್ತು ಅನೇಕ ಹೋರಾಟಗಾರರ ಬಗ್ಗೆ ಶಿಕ್ಷಕರಾದ ನಾವು ಮಕ್ಕಳಲ್ಲಿ ಅರಿವನ್ನು ಮೂಡಿಸಬೇಕು ಎಂದು ತಿಳಿಸಿಕೊಟ್ಟರು.
ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ವೈಭವ ಜೀವನದ ಕಡೆಯಿಂದ ಸರಳ ಜೀವನದ ಕಡೆ ನಡೆಯಬೇಕು. ನನ್ನ ಜೀವನವೇ ನನ್ನ ಸಂದೇಶ ಎಂಬಂತೆ ನಾವು ಮಾಡುವ ಕಾರ್ಯ ದೇಶದ ಒಳಿತಿಗಾಗಿರಬೇಕು ಎಂದು ಹೇಳಿದರು.
ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಟರಾಜ ಮಹಿಳಾ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಿ.ಪ್ರಸಾದಮೂರ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ದಂಡಿಕೆರೆ ನಾಗರಾಜ್ ಇತರರಿದ್ದರು. ಸುನೀತಾರಾಣಿ ಮತ್ತು ತಂಡದಿಂದ ಗಾಂಧಿ ತತ್ವದ ಸಾಮೂಹಿಕ ಪ್ರಾರ್ಥನೆ ನಡೆಯಿತು.