ಜಿಲ್ಲೆ

ಗುಣಮಟ್ಟದ ಶಿಕ್ಷಣದಿಂದ ಸುಭದ್ರ ಸಮಾಜ ನಿರ್ಮಾಣ

ಬಸವರಾಜ ವೀರಪ್ಪ ಗರಗ

ಸಿದ್ದಾಪುರ: ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸುಭದ್ರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸ್ಕೊಡ್​ವೆಸ್ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್. ರವಿ ಹೇಳಿದರು.

ದೇವರಕಾಡು ಸಂರಕ್ಷಣಾ ಅಭಿಯಾನದ ಪ್ರಯುಕ್ತ ತಾಲೂಕಿನ ಹಲಗೇರಿ ಸಮೀಪದ ಮತ್ತಿಗಾರ, ಅರಳಿಹೊಂಡ ಪ್ರದೇಶದ ಮಕ್ಕಳಿಗೆ ಸ್ಕೊಡ್​ವೆಸ್ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಚಿತ ಪಠ್ಯಪುಸ್ತಕ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು. ಸರಿಯಾದ ಸಮಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆತಲ್ಲಿ ನಿಜವಾದ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದಲೇ ಉಚಿತ ಪಠ್ಯ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ದೇವರಕಾಡು ಸಂರಕ್ಷಣಾ ಅಭಿಯಾನ ವಿಸ್ತರಿಸುವ ಪ್ರದೇಶಗಳಲ್ಲಿಯೂ ಈ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ ಎಂದರು.

ಸ್ಕೊಡ್​ವೆಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಕೆ.ಎನ್. ಹೊಸಮನಿ ಮಾತನಾಡಿ, ಭವಿಷ್ಯದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಪ್ರತಿಭಾವಂತರಾಗಬೇಕು ಎಂದರು.

ಸಂಸ್ಥೆಯ ಆಡಳಿತ ಮಂಡಳಿಯ ಸಹ-ಕಾರ್ಯದರ್ಶಿ ವಸಂತ ಹಾದಿಮನೆ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ, ಕಾರ್ಯಕ್ರಮ ಅಧಿಕಾರಿ ಮಾಲತಿ ರ್ಕ ಹಾಗೂ ಸಂಸ್ಥೆಯ ವಿವಿಧ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.

ಸಿದ್ದಾಪುರದ ಮತ್ತಿಗಾರ, ಅರಳಿಹೊಂಡ, ಹಲಗೇರಿ ಸುತ್ತಲಿನ ಪ್ರದೇಶಗಳ ದೇವರಕಾಡು ಸಂರಕ್ಷಣಾ ಅಭಿಯಾನ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳಿಗೆ ಇಡೀ ವರ್ಷಕ್ಕೆ ಬೇಕಾದ ಶೈಕ್ಷಣಿಕ ಪಠ್ಯ ಪುಸ್ತಕ ಹಾಗೂ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.