ಹುಬ್ಬಳ್ಳಿ : ಮಹಿಳೆ ಮತ್ತು ಪುರುಷ ಸಮಾನತೆ ಸಾಧ್ಯವಾದಾಗ ಮಾತ್ರ ಸಮಗ್ರ ಮತ್ತು ಸಮೃದ್ಧ ಭಾರತ ನಿಮಾರ್ಣವಾಗಬಲ್ಲದು ಎಂದು ನೈಋತ್ಯ ರೈಲ್ವೆ ವಲಯದ ಹಣಕಾಸು ಸಲಹೆಗಾರರು ಹಾಗೂ ಮುಖ್ಯ ಲೆಕ್ಕಾಧಿಕಾರಿ ಕುಸುಮಾ ಹರಿಪ್ರಸಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಕೇಶ್ವಾಪುರದಲ್ಲಿರುವ ನೈಋತ್ಯ ರೈಲ್ವೆ ಕನ್ನಡ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ತಾನು ಅಬಲೆಯಲ್ಲ ಸಬಲೆ ಎಂಬುದನ್ನು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರ ಮೂಲಕ ತೋರಿಸುತ್ತಿದ್ದಾರೆ. ಶಿವಾಜಿಯ ತಾಯಿ ಜೀಜಾಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಕ್ಕ ಮಹಾದೇವಿ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಸೇರಿದಂತೆ ಹಲವು ಮಹಿಳೆಯರು ಇತಿಹಾಸದಲ್ಲಿ ಹೆಸರು ದಾಖಲಿಸಿದ್ದಾರೆ ಎಂದರು.
ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಕಾರ್ಯದಶಿರ್ ಅನಿತಾ ಶಾಸ್ತ್ರಿ ಮಾತನಾಡಿ, ಮಹಿಳೆ ಎಷ್ಟೆಲ್ಲಾ ಸಾಧನೆ ಮಾಡಿದರೂ ಆಕೆಯ ಮೇಲಿನ ಶೋಷಣೆ ನಿಲ್ಲುತ್ತಿಲ್ಲ ಎಂಬುದು ಕಳವಳದ ಸಂಗತಿ. ಕಾನೂನುಗಳ ಅರಿವು ಹೆಣ್ಣುಮಕ್ಕಳಿಗೆ ಇರಬೇಕು ಎಂದು ಹೇಳಿದರು.
ಕೇಂದ್ರೀಯ ರೈಲ್ವೆ ಆಸ್ಪತ್ರೆಯ ಹಿರಿಯ ವಿಭಾಗೀಯ ವೈದ್ಯಾಧಿಕಾರಿ ಡಾ. ತೇಜಸ್ವಿನಿ ಗೌರಿಪುರ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟನೆ ಬಹಳ ಮುಖ್ಯ. ಎಲ್ಲರೂ ಒಂದಾಗಿ ದೌರ್ಜನ್ಯವನ್ನು ವಿರೋಧಿಸಬೇಕು. ಭಾರತದಲ್ಲಿ ಮಹಿಳೆಯನ್ನು ಪೂಜ್ಯನಿಯ ಸ್ಥಾನದಲ್ಲಿ ಇಡಲಾಗಿದೆ ಎಂದು ತಿಳಿಸಿದರು.
ನೈಋತ್ಯ ರೈಲ್ವೆ ಕನ್ನಡ ಸಂಘದ ಅಧ್ಯಕ್ಷ ಬಿ.ಎಲ್. ಶಿವಕುಮಾರ, ಪ್ರಧಾನ ಕಾರ್ಯದಶಿರ್ ಶಂಭುಲಿಂಗ ಬಿರಾದಾರ, ಮೈಲಾರಲಿಂಗ ಕಬ್ಬೂರ, ಮಹಾಂತಪ್ಪ ನಂದೂರ, ಮಹೇಶ ಎ.ಎಸ್., ಸಿ.ಎಂ. ಮುನಿಸ್ವಾಮಿ, ಕಿರಣ ಚಿನ್ನಾ ರಾಠೋಡ, ಜಗದೀಶ ಭಜಂತ್ರಿ, ರಮೇಶ ಚವ್ಹಾಣ, ಆದಯ್ಯ ಹಿರೇಮಠ, ಚನ್ನಬಸಪ್ಪ ಚೌಗಲಾ, ಸುರೇಶ ರಾಠೋಡ ಹಾಗೂ ಇತರರು ಇದ್ದರು.