ಅರಕಲಗೂಡು: ಗರ್ಭಿಣಿಯರು ಮತ್ತು ಮಕ್ಕಳು ಪೌಷ್ಟಿಕ ಆಹಾರ ಸೇವಿಸಬೇಕೆಂಬ ಉದ್ದೇಶದಿಂದ ಸರ್ಕಾರ ಪೋಷಣಾ ಅಭಿಯಾನ ಜಾರಿಗೆ ತಂದಿದೆ ಎಂದು ಶಾಸಕ ಎ.ಮಂಜು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಶನಿವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ ಪೋಷಣಾ ಅಭಿಯಾನ ಮಾಸಾಚರಣೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗರ್ಭಿಣಿಯರು ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡಿದಾಗ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ಬೆಳೆಯುವ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿದಾಗ ದಷ್ಟಪುಷ್ಟವಾಗಿ ಬೆಳೆಯುತ್ತದೆ. ಆರೋಗ್ಯವಂತ ಸಮಾಜ ರೂಪುಗೊಳ್ಳಬೇಕಾದರೆ ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆ ಅಗತ್ಯ. ಅಂಗನವಾಡಿಗಳ ಮೂಲಕ ಗರ್ಭಿಣಿಯರು ಮತ್ತು ಮಕ್ಕಳಿಗೆ ಪೋಷಕಾಂಶ ಯುಕ್ತ ಆಹಾರ ನೀಡುವ ಯೋಜನೆ ರೂಪಿಸಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಟೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನ ನಡೆಸಲಾಯಿತು. ಪಪಂ ಸದಸ್ಯರಾದ ಹೂವಣ್ಣ, ಎಂ.ಕೆ. ಕೃಷ್ಣಯ್ಯ, ಸುಮಿತ್ರಾ, ಅನುಷಾ, ಮಾಜಿ ಸದಸ್ಯ ಅಬ್ದುಲ್ ಅಲೀಂ, ಜಿಲ್ಲಾ ನಿರೂಪಣಾಧಿಕಾರಿ ಕುಮಾರ್, ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಅಂಬಿಕಾ, ರಾಜ್ಯ ಸಮಿತಿ ಸದಸ್ಯೆ ಲೀನಾಡಯಾಸ್ ಇದ್ದರು.