ಹುಬ್ಬಳ್ಳಿ: ಹುಬ್ಬಳ್ಳಿ ಉತ್ತರ ಮತ್ತು ದಕ್ಷಿಣ ಹಿರಿಯ ಉಪ ನೋಂದಣಿ ಕಚೇರಿಯು 2023-24ನೇ ಸಾಲಿಗೆ ಶೇ. 80ರಿಂದ ಶೇ. 120 ರಷ್ಟು ಏರಿಕೆಯೊಂದಿಗೆ ಪರಿಷ್ಕರಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯನ್ನು ಒಪ್ಪಲು ಸಾಧ್ಯವಿಲ್ಲ. ಶೇ. 15ರಿಂದ ಶೇ. 30ರಷ್ಟು ಏರಿಕೆಯು ಸಹನೀಯವಾದುದು ಎಂದು ಹುಬ್ಬಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿಗಳು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ನಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಪರಿಷ್ಕೃತ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯ ಬಗ್ಗೆ ಚರ್ಚೆ ನಡೆಸಲಾಯಿತು.
ಕ್ರೆಡೈ ಹು-ಧಾ ಅಧ್ಯಕ್ಷ ಸಂಜಯ ಕೊಠಾರಿ ಮಾತನಾಡಿ, ಪ್ರತಿ ಮೂರು ವರ್ಷಗಳಿಗೆ ಮಾರ್ಗಸೂಚಿ ದರವನ್ನು ಕನಿಷ್ಠ ಶೇ. 15ರಿಂದ ಗರಿಷ್ಠ ಶೇ. 30ರವರೆಗೆ ಏರಿಕೆ ಮಾಡಲು ಅವಕಾಶವಿದೆ ಎಂದು ನಾವು ಭಾವಿಸಿದ್ದೇವು. ಇಲ್ಲಿಯ ಉತ್ತರ ಮತ್ತು ದಕ್ಷಿಣ ಉಪ ನೋಂದಣಿ ಕಚೇರಿಯು ವಿಪರೀತ ಏರಿಕೆ ಮಾಡಿವೆ. ಕೆಲವೆಡೆ ಮಾರುಕಟ್ಟೆ ಮೌಲ್ಯಕ್ಕಿಂತ ಮಾರ್ಗಸೂಚಿ ದರವೇ ಹೆಚ್ಚಾಗಿವೆ ಎಂದರು.
ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಸ್ಥಿರಾಸ್ತಿಗಳ ಮಾರ್ಗಸೂಚಿ ದರ ವಿಪರೀತ ಏರಿಕೆ ಮಾಡಿದರೆ ಅಕ್ರಮ-ಸಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.
ಹುಬ್ಬಳ್ಳಿ ಉತ್ತರ ಹಿರಿಯ ಉಪ ನೋಂದಣಾಧಿಕಾರಿ ಎಸ್.ಬಿ. ಕೋಟಿ ಮಾತನಾಡಿ, ಮಾರ್ಗಸೂಚಿ ದರವನ್ನು ನಿರ್ದಿಷ್ಟವಾಗಿ ಇಂತಿಷ್ಟೇ ಏರಿಕೆ ಮಾಡಬೇಕೆಂಬ ಸುತ್ತೋಲೆ ಇಲ್ಲ. ನಾವು ಇತ್ತೀಚಿನ ಮಾರಾಟ ಅಂಕಿಅಂಶಗಳು ಹಾಗೂ ಡಿಸ್ಕವರ್ ರೇಟ್ ತುಲನೆ ಮಾಡಿ ದರ ಪರಿಷ್ಕರಣೆ ಮಾಡಿದ್ದೇವೆ. ಒಂದೇ ಬಡಾವಣೆಯ ಅಕ್ಕ ಪಕ್ಕ ಸ್ಥಿರಾಸ್ತಿಗಳ ದರ ವೈಪರೀತ್ಯವನ್ನು ಸರಿದೂಗಿಸಬೇಕಾಗುತ್ತದೆ. ಕಳೆದ 3-4 ವರ್ಷಗಳಲ್ಲಿ ಕೆಲ ಪ್ರದೇಶಗಳು ತ್ವರಿತವಾಗಿ ಅಭಿವೃದ್ಧಿ ಹೊಂದಿವೆ. ಇಂಥ ಪ್ರಕರಣಗಳಲ್ಲಿ ಏರಿಕೆ ಹೆಚ್ಚಾಗಿದೆ ಎಂದು ಸ್ಪಷ್ಟನೆ ನೀಡಿದರು.
ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಪರಿಷ್ಕರಿಸಿ ಪ್ರಕಟಿಸುವ ಪೂರ್ವ ಜನಪ್ರತಿನಿಧಿಗಳ ಗಮನಕ್ಕೆ ತರಬೇಕೆಂದು ತಮಗೆ ಅನಿಸಲಿಲ್ಲವೇ? ಪರಿಷ್ಕೃತ ದರಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇಂದಿನಿಂದ 15 ದಿನಗಳ ಕಾಲಾವಕಾಶ ನೀಡಬೇಕು. ಅಂತಿಮಗೊಳಿಸುವ ಪೂರ್ವ ನನ್ನ ಗಮನಕ್ಕೆ ತರಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ, ಅಧಿಕಾರಿಗಳಿಗೆ ಸೂಚಿಸಿದರು.
ಪರಿಷ್ಕೃತ ಮಾರ್ಗಸೂಚಿ ದರಪಟ್ಟಿಯ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದರೂ ಇಂದಿನವರೆಗೂ ಬಿಲ್ಡರ್ಗಳ ಕೈಗೆ ಸಂಪೂರ್ಣ ವಿವರವುಳ್ಳ ಬುಕ್ಲೆಟ್ ನೀಡಿಲ್ಲ. ಹೀಗಾದರೆ ಆಕ್ಷೇಪಣೆ ಸಲ್ಲಿಸುವುದಾದರೂ ಹೇಗೆ? ಶೇ. 30ರಷ್ಟು ಏರಿಕೆಗೆ ಬಿಲ್ಡರ್ಸ್ ಹಾಗೂ ಡೆವಲಪರ್ಸ್ಗಳ ಒಪ್ಪಿಗೆ ಇದೆ. ಅಧಿಕಾರಿಗಳು ಒಪ್ಪುವುದಾದರೆ ಇಂದಿನ ಸಭೆಯಲ್ಲಿಯೇ ಪರಿಷ್ಕೃತ ದರಪಟ್ಟಿಗೆ ಅನುಮೋದನೆ ನೀಡುತ್ತೇವೆ ಎಂದರು.
ಶೇ. 80-90 ರಷ್ಟು ಏರಿಕೆ ಮಾಡಲು ಮಾನದಂಡ ಏನಾದರೂ ಇದೇಯಾ? ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಉದ್ದೇಶದಿಂದ ಹೀಗೆ ಮಾಡಿ ಎಂದು ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಮೌಖಿಕ ಸಂದೇಶ ಬಂದಿರಬಹುದು ಎಂದು ಹೇಳಿದರು.
ಜಿಲ್ಲಾ ನೋಂದಣಾಧಿಕಾರಿ ಅಶೋಕ, ಬಿಲ್ಡರ್ಸ್ಗಳಾದ ಶಾಂತರಾಜ ಪೋಳ, ಪ್ರಕಾಶ ಜೋಶಿ, ಇತರರು ಇದ್ದರು.