ವಿಜಯವಾಣಿ ಸುದ್ದಿಜಾಲ ಧಾರವಾಡ
ಫೋರಂ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಧಾರವಾಡ ಮತ್ತು ದಿ. ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ ಸ್ಥಾನಿಯ ಸಂಸ್ಥೆ ಹಾಗೂ ಹು-ಧಾ ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಲಾಭವನ ಮೈದಾನದಲ್ಲಿ ಏರ್ಪಡಿಸಿರುವ ಬಿಲ್ಡೆಕೋರ-2025 ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.
ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ ಪ್ರದರ್ಶನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಅಕ್ರಮ ಲೇಔಟ್ಗಳ ನಿರ್ಮಾಣ ಕೇವಲ ಹು-ಧಾ ಮಾತ್ರವಲ್ಲದೆ, ಎಲ್ಲ ಕಡೆಗಳಲ್ಲೂ ವ್ಯಾಪಿಸಿದೆ. ಹೀಗಾಗಿ ಅಕ್ರಮ ಲೇಔಟ್ಗಳ ನಿರ್ಮಾಣ ತಡೆಗೆ ಪ್ರಯತ್ನಿಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.
ಮೇಯರ್ ರಾಮಪ್ಪ ಬಡಿಗೇರ ಮಾತನಾಡಿದರು. ದಿ. ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ ಸ್ಥಾನಿಯ ಸಂಸ್ಥೆ ಅಧ್ಯಕ್ಷ ಡಾ. ವಿ.ಎಸ್. ಹವಾಲ್ದಾರ ಅಧ್ಯಕ್ಷತೆ ವಹಿಸಿದ್ದರು.
ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ಸಿಮೆಂಟ್ ಉತ್ಪಾದಕರು, ನೀರು ಸರಬರಾಜು ಸಾಮಗ್ರಿಗಳ ಉತ್ಪಾದಕರು, ಗೋಡೆ, ನೆಲಹಾಸುಗಲ್ಲುಗಳ ಉತ್ಪಾದಕರು, ವಾಟರ್ ಪ್ರೂಫಿಂಗ್, ಕಾಂಕ್ರೀಟ್ ವಸ್ತುಗಳ ಉತ್ಪಾದಕರು ಸೇರಿ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದ 65 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ವೀಕ್ಷಣೆಗೆ ಉಚಿತ ಪ್ರವೇಶ ನೀಡಲಾಗಿದೆ.
ಬಿಲ್ಡೆಕೋರ ಅಧ್ಯಕ್ಷ ಎ.ಸಿ. ತಹಸೀಲ್ದಾರ, ಫೋರಂ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಧಾರವಾಡ ಅಧ್ಯಕ್ಷ ಸಂತೋಷ ಅಂಚಟಗೇರಿ, ಸತೀಶ ನಾಯ್ಕರ, ಶ್ರೀಹರಿ ಕೆ.ಎಚ್., ಪದಾಧಿಕಾರಿಗಳು, ಇಂಜಿನಿಯರ್ಸ್ಗಳು, ಇತರರು ಇದ್ದರು.