ಜಿಲ್ಲೆ

ಕಾಂಪೌಂಡ್ ಕಟ್ಟಿಸಿ ಮೈದಾನ ಉಳಿಸಿ, 4 ಎಕರೆ ವಿಸ್ತೀರ್ಣದ ಶಾಲಾ ಮೈದಾನ, ಇಟ್ಟಿಗೆ ಭಟ್ಟಿ, ಫಿಲ್ಟರ್ ಮರಳು ದಂಧೆಕೋರರ ತಾಣ

Bengaluru Rural

ಕುಂದಾಣ: ಕಾರಹಳ್ಳಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲೆಯ 4 ಎಕರೆ ಆಟದ ಮೈದಾನದಲ್ಲಿ ಆಳೆತ್ತರದ ಗುಂಡಿಗಳಿದ್ದು, ಮೈದಾನದ ಸುತ್ತ ಕಾಂಪೌಂಡ್ ನಿರ್ಮಿಸಿ, ಭದ್ರತೆ ಒದಗಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

ಈ ಮೈದಾನ ಹಿಂದೆ ಫಿಲ್ಟರ್ ಮರಳು ದಂಧೆಕೋರರು ಮತ್ತು ಇಟ್ಟಿಗೆ ಭಟ್ಟಿ ಮಾಡುವವರ ಅಡ್ಡೆಯಾಗಿತ್ತು. ಹಾಗಾಗಿ ಮರಳಿಗಾಗಿ ಮತ್ತು ಇಟ್ಟಿಗೆ ಭಟ್ಟಿಗೆ ಅಗತ್ಯವಾದ ಮಣ್ಣಿಗಾಗಿ ಆಳೆತ್ತರದವರೆಗೂ ಮಣ್ಣು ಅಗೆಯಲಾಗುತ್ತಿತ್ತು. ಈಗಲೂ ಅಗೆಯಲಾಗುತ್ತಿದ್ದು, ಇದರಿಂದಾಗಿ ವಿಶಾಲ ಮೈದಾನವಿದ್ದರೂ ಮಕ್ಕಳಿಗೆ ಆಟವಾಡಲು ಸಾಧ್ಯವಾಗದಂತಾಗಿದೆ.

ಬಂದಿದೆ ನರೇಗಾ ಅನುದಾನ: ನರೇಗಾ ಯೋಜನೆಯಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸಲು ಕಾರಹಳ್ಳಿ ಗ್ರಾಪಂ ಮೂಲಕ 2019ರಲ್ಲಿ 6.70 ಲಕ್ಷ ರೂ. ಅನುದಾನ ಬಂದಿದೆ. ಕಾಮಗಾರಿ ನಡೆದಿರುವಂತೆ ಬೋರ್ಡ್ ಹಾಕಲಾಗಿದೆ. ಆದರೆ, ವಾಸ್ತವದಲ್ಲಿ ಶೇ.10 ಕಾಮಗಾರಿ ಕೂಡ ನಡೆದಿಲ್ಲ.

ನೆರೆ-ಹೊರೆ ಜಮೀನಿನವರ ತಕರಾರು: ಶಾಲೆಯ ಆಟದ ಮೈದಾನದ ಸುತ್ತ ಕಾಂಪೌಂಡ್ ನಿರ್ಮಿಸಲು ನೆರೆ-ಹೊರೆ ಜಮೀನಿನ ಮಾಲೀಕರ ತಕರಾರು ಇದೆ. ಇದನ್ನು ಬಗೆಹರಿಸಲು ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಕಾಳಜಿ ತೋರುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಒಂದು ವೇಳೆ ತಕರಾರನ್ನು ಬಗೆಹರಿಸಿದ್ದರೆ, ನರೇಗಾ ಯೋಜನೆಯಡಿ ಈ ವೇಳೆಗಾಗಲೆ ಕಾಂಪೌಂಡ್ ನಿರ್ಮಾಣವಾಗಿರುತ್ತಿತ್ತು.

ನಮ್ಮ ಶಾಲೆ ಎಂದು ಕಾಳಜಿ ತೋರಿ ವಿವಾದ ಬಗೆಹರಿಸಲು ಪ್ರಯತ್ನಿಸಿದೆ. ಇದರಿಂದಾಗಿ ಕೆಲವರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಗ್ರಾಮಸ್ಥರು ಸ್ವಲ್ಪ ಆಸ್ಥೆ ವಹಿಸಿ, ನೆರೆ-ಹೊರೆ ಜಮೀನಿನವರೊಂದಿಗಿನ ವಿವಾದ ಬಗೆಹರಿಸಿಕೊಟ್ಟರೆ ಕಾಂಪೌಂಡ್ ನಿರ್ಮಿಸಲು ಅನುಕೂಲವಾಗುತ್ತದೆ. ವೇದಾವತಿ, ಕಾರಹಳ್ಳಿ ಶಾಲೆ ಮುಖ್ಯಶಿಕ್ಷಕಿ ಕಾರಹಳ್ಳಿ ಶಾಲೆ ಜಮೀನು ವಿವಾದದ ಬಗ್ಗೆ ಮಾಹಿತಿ ಇದೆ. ಈ ಕುರಿತು ತಹಸೀಲ್ದಾರ್ ಜತೆ ಚರ್ಚಿಸಿ, ವಿವಾದ ಬಗೆಹರಿಸಲು ಯತ್ನಿಸುತ್ತೇನೆ. ಕಾಂಪೌಂಡ್ ನಿರ್ಮಾಣಕ್ಕೂ ಸಹಕರಿಸುತ್ತೇನೆ. ಅಶ್ವತ್ಥ ನಾರಾಯಣ್, ಬಿಇಒ, ದೇವನಹಳ್ಳಿ ಶಾಲೆ ಮೈದಾನದ ಸುತ್ತಮುತ್ತ ಪೊದೆಗಳು ಬೆಳೆದು, ಹಾವು ಮತ್ತಿತರ ವಿಷಜಂತುಗಳು ಓಡಾಡುತ್ತವೆ. ಇದರಿಂದ ಮಕ್ಕಳಿಗೆ ಅಪಾಯವಾಗುವ ಸಂಭವವಿದೆ. ಅನಾಹುತ ಸಂಭವಿಸುವುದಕ್ಕೂ ಮುನ್ನವೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕಾಂಪೌಂಡ್ ನಿರ್ಮಿಸಲಿ. ಕೆಂಪಣ್ಣ, ಗ್ರಾಮಸ್ಥ