ಜಿಲ್ಲೆ

ಪಾದಚಾರಿ ಸ್ನೇಹಿ ಫುಟ್‌ಪಾತ್ ನಿರ್ಮಿಸಿರಿ: ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್

ಬೆಂಗಳೂರು: ಬನ್ನೇರುಘಟ್ಟ ಮುಖ್ಯರಸ್ತೆಯ ಮೆಟ್ರೋ ಮಾರ್ಗದಲ್ಲಿನ ಪಾದಚಾರಿ ಮಾರ್ಗವನ್ನು ಮಾದರಿ ಫುಟ್‌ಪಾತ್ ಆಗಿ ನಿರ್ಮಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ಡೇರಿ ವೃತ್ತದಿಂದ ಐಐಎಂ-ಬಿ ವರೆಗೆ ಪಾದಚಾರಿ ಮಾರ್ಗ, ರಸ್ತೆ ಗುಂಡಿ, ಸ್ವಚ್ಛತೆ ಸೇರಿ ಇತರ ವಿಷಯಗಳಿಗೆ ಸಂಬಂಧಿಸಿ ಅಧಿಕಾರಿಗಳೊಂದಿಗೆ ನಡಿಗೆ ಮೂಲಕ ಪರಿಶೀಲನೆ ನಡೆಸಿದ ವೇಳೆ ಅವರು ಈ ನಿರ್ದೇಶನವನ್ನು ಮಂಗಳವಾರ ನೀಡಿದರು.

ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಗುಲಾಬಿ (ಪಿಂಕ್) ಮೆಟ್ರೋ ಮಾರ್ಗ ಬರಲಿದೆ. ಈ ಮಾರ್ಗದಲ್ಲಿ ಪಾದಚಾರಿ ಮಾರ್ಗಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಿ ನಾಗರಿಕ ಸ್ನೇಹಿಯಾಗಿ ರೂಪಿಸಬೇಕು. ಇದಕ್ಕಾಗಿ ಸ್ಲ್ಯಾಬ್‌ಗಳು, ಕರ್ಬ್ ಸ್ಟೋನ್‌ಗಳು ಹಾಳಾಗಿರುವ ಕಡೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಫುಟ್‌ಪಾತ್‌ಗಳು ಎತ್ತರವಿರುವ ಕಡೆ ಕಡಿಮೆಗೊಳಿಸಿ ಒಂದೇ ರೀತಿಯಲ್ಲಿರುವಂತೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಕೊನೆಯ ಹಂತದ ಸಂಪರ್ಕಕ್ಕೆ ಕ್ರಮ:

ಪಾದಚಾರಿ ಮಾರ್ಗಗಳನ್ನು ಸುವ್ಯವಸ್ಥಿತವಾಗಿ ನಿರ್ಮಿಸಿದರೆ ಸಾರ್ವಜನಿಕ ಸಾರಿಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಅಥವಾ ಬಸ್ ನಿಲ್ದಾಣದಿಂದ ನಾಗರಿಕರಿಗೆ ಕೊನೆಯ ಹಂತದ ಸಂಪರ್ಕ (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಕಲ್ಪಿಸಲು ಸಾಧ್ಯವಾಗಲಿದೆ. ುಟ್‌ಪಾತ್‌ಗಳನ್ನು ಸಮರ್ಪಕವಾಗಿ ನಿರ್ಮಿಸಿದರೆ ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ಹೆಚ್ಚಾಗಲಿದೆ. ಹಾಗಾಗಿ ುಟ್‌ಪಾತ್ ಮಾರ್ಗದಲ್ಲಿ ಸರಾಗವಾಗಿ ಓಡಾಡಲು ಯಾವುದೇ ತೊಡಕು ಇಲ್ಲದಂತೆ ಹಾಗೂ ಒತ್ತುವರಿ ತೆರವುಗೊಳಿಸಲು ಆದ್ಯತೆ ನೀಡುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಸ್ ಬೇ ನಿರ್ಮಾಣ:

ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಬಸ್ ನಿಲ್ಲಿಸುವ ಜಾಗಗಳಲ್ಲಿ ನಾಗರಿಕರಿಗೆ ತಂಗುದಾಣ ಇಲ್ಲದಿರುವುದನ್ನು ಗಮನಿಸಿ, ರಸ್ತೆ ಅಗಲವಿರುವ ಕಡೆ ಬಸ್ ನಿಲ್ಲಲು ವ್ಯವಸ್ಥೆ ಮಾಡುವುದರ ಜತೆಗೆ ಬಸ್ ಶೇಲ್ಟರ್‌ಗಳನ್ನು ನಿರ್ಮಿಸಬೇಕು. ಐಐಎಂಬಿ ಮುಂಭಾಗ ಮಳೆ ನೀರುಗಾಲುವೆ ಬರಲಿದ್ದು, ಅದರ ಮೇಲೆ ಪಾದಚಾರಿಗಳು ಓಡಾಡಲು ಅನುಕೂಲವಾಗುವಂತೆ ಗ್ರೇಟಿಂಗ್ ಅಳವಡಿಸಲು ಮುಖ್ಯ ಆಯುಕ್ತರು ಅದಕ್ಕಾಗಿ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಪರಿಶೀಲನೆ ವೇಳೆ ದಕ್ಷಿಣ ವಲಯ ಆಯುಕ್ತ ದಿಗ್ವಿಜಯ್ ಬೋಡ್ಕೆ, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

5.5 ಕಿ.ಮೀ. ನಡಿಗೆ ಮೂಲಕ ಪರಿಶೀಲನೆ:

ಮುಖ್ಯ ಆಯುಕ್ತರು ವಿವಿಧ ವಲಯಗಳಲ್ಲಿ ಪರಿಶೀಲನೆ ವೇಳೆ ನಡಿಗೆ ಮೂಲಕ ಫುಟ್‌ಪಾತ್ ಮಾರ್ಗ ಸಹಿತ ಇತರ ಸೌಕರ್ಯ ವೀಕ್ಷಿಸುವುದನ್ನು ಅನುಸರಿಸಿಕೊಂಡು ಬಂದಿದ್ದಾರೆ. ಇದೇ ಮೊದಲ ಬಾರಿ ಡೇರಿ ವೃತ್ತದಿಂದ ತಾವರೆಕೆರೆ, ಜಯದೇವ ಆಸ್ಪತ್ರೆ, ಜೆ.ಪಿ.ನಗರ 4ನೇ ಹಂತ ಮತ್ತು ಐಐಎಂಬಿವರೆಗೆ 5.5 ಕಿ.ಮೀ. ಉದ್ದಕ್ಕೂ ನಡಿಗೆ ಮೂಲಕ ಪರಿಶೀಲನೆ ನಡೆಸಿದರು.