ಹುಣಸೂರು ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 1 ಮತ್ತು 2ಕ್ಕೆ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಭೇಟಿ ನೀಡಿ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿದರು. ದೇವರಾಜ್, ಆಶಾ ಕೃಷ್ಣನಾಯಕ, ಪೌರಾಯುಕ್ತೆ ಕೆ.ಮಾನಸ, ಎಇಇ ಶರ್ಮಿಳಾ ಇತರರಿದ್ದಾರೆ.  
ಜಿಲ್ಲೆ

ಶೀಟಿನ ಸೂರಿನಡಿ ವಾಸಿಸುವವರಿಗೆ ಮನೆ ನಿರ್ಮಿಸಿಕೊಡಿ

ರವಿಕುಮಾರ್ ಪಿ. ಕೆ

ಹುಣಸೂರು: 25 ವರ್ಷಗಳಿಂದ ವಿದ್ಯುತ್ ದೀಪದ ಬೆಳಕೇ ಕಾಣದ ಮನೆಗಳು, ಮನೆಯ ಹಕ್ಕುಪತ್ರವಿದ್ದರೂ ತಗಡು ಶೀಟಿನ ಮೇಲ್ಛಾವಣಿಯಲ್ಲಿ ಬದುಕುತ್ತಿರುವ ಕುಟುಂಬಗಳು, ಒಂದಲ್ಲ ಒಂದು ರೀತಿಯ ವಸತಿ ಸಮಸ್ಯೆಯಿಂದಲೇ ಸೊರಗುತ್ತಿದ್ದಾರೆ ಇಲ್ಲಿನ ನಿವಾಸಿಗಳು.

ಹುಣಸೂರು ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ವಾರ್ಡ್ ಭೇಟಿ ಕಾರ್ಯಕ್ರಮದ ವೇಳೆ ಒಂದನೇ ವಾರ್ಡ್‌ನಲ್ಲಿ ಕಂಡುಬಂದ ದೃಶ್ಯಗಳಿವು. ಈ ವೇಳೆ ಮಾತನಾಡಿದ ವಾರ್ಡ್ ಸದಸ್ಯ ದೇವರಾಜ್, 25 ವರ್ಷಗಳ ಹಿಂದೆ ಆಶ್ರಯ ಯೋಜನೆಯಡಿ ನಿವೇಶನ ಪಡೆದ 30ಕ್ಕೂ ಹೆಚ್ಚು ಫಲಾನುಭವಿಗಳು ಇಂದಿಗೂ ತಗಡುಶೀಟಿನ ಮನೆಯಲ್ಲಿ ಕಿಷ್ಕಿಂಧೆಯಂತೆ 2-3 ಕುಟುಂಬಗಳು ವಾಸಿಸುತ್ತಿವೆ. ಪರಿಶಿಷ್ಟರೇ ಹೆಚ್ಚಾಗಿರುವ ಈ ಕುಟುಂಬಗಳಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ದೀಪದ ಕಂಬದ ಕೆಳಗೆ ಕತ್ತಲೆ ಎನ್ನುವಂತೆ ವಾರ್ಡ್‌ನಲ್ಲಿ 20 ಮನೆಗಳಿಗೆ ಕಳೆದ 20 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲ. ನಗರಸಭೆ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ವಂಚಿತ ಮನೆಗಳಿವೆ ಎನ್ನುವುದನ್ನು ಕೇಳಿ ನಗರಸಭಾಧ್ಯಕ್ಷರು ದಂಗಾದರು. ದಶಕಗಳ ಹಿಂದೆ ಸ್ಲಂ ಬೋರ್ಡ್‌ನಿಂದ ಮಂಜೂರಾಗಿರುವ 25ಕ್ಕೂ ಹೆಚ್ಚು ಮನೆಗಳಿದ್ದು, ಈ ಮನೆಗಳಿಗೆ ಈವರೆಗೆ ಮನೆಯ ಹಕ್ಕುಪತ್ರ ನೀಡಿಲ್ಲ. ಕಾರಣ ಎರಡ್ಮೂರು ತಲೆಮಾರುಗಳಿಂದ ವಾಸಿಸುತ್ತಿದ್ದು, ಮೃತರ ಮರಣ ಪತ್ರ ಸಿಗದಿರುವ ಕಾರಣ ಸ್ಲಂಬೋರ್ಡ್‌ನಿಂದ ನೇರವಾಗಿ ಹಕ್ಕುಪತ್ರ ನೀಡಿ ನಂತರ ನಗರಸಭೆ ಖಾತೆ ಮಾಡಿಕೊಡಬೇಕೆಂದು ನಿರ್ಧರಿಸಲಾಗಿತ್ತು. ಈ ನಡುವೆ ಸರ್ಕಾರ ಇ-ಸ್ವತ್ತು ದಾಖಲೆ ಹೊಂದಿರದ ಆಸ್ತಿಗಳಿಗೆ ಖಾತೆ ಮಾಡಿಕೊಡಬಾರದೆಂದು ಸರ್ಕಾರ ಆದೇಶಿಸಿರುವುದಿಂದ ಸಮಸ್ಯೆ ಕಗ್ಗಂಟಾಗಿದೆ ಎಂದು ದೇವರಾಜ್ ಮಾಹಿತಿ ನೀಡಿದರು.

ಎರಡನೇ ವಾರ್ಡ್‌ನಲ್ಲಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿದೆ ಎಂದು ನಿವಾಸಿಗಳು ದೂರಿದಾಗ ದಾಖಲೆಗಳನ್ನು ಪರಿಶೀಲಿಸಿ ಕ್ರಮವಹಿಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ನಗರಸಭಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ವಾರ್ಡ್ 1ರಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಪಡೆದ ಫಲಾನುಭವಿಗಳಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲು ಶಾಸಕ ಜಿ.ಡಿ.ಹರೀಶ್‌ಗೌಡ ಅವರಿಗೆ ಮನವಿ ಸಲ್ಲಿಸಲಾಗುವುದು. 20ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲವೆನ್ನುವುದೇ ಬೇಸರದ ವಿಷಯವಾಗಿದ್ದು, ಇನ್ನೆರಡು ದಿನಗಳಲಿ ಸೆಸ್ಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮವಹಿಸಲಾಗುವುದು. ಸ್ಲಂ ಬೋರ್ಡ್‌ನಿಂದ ನಿವೇಶನ ಪಡೆದವರ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದು ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಖಾತೆ ಮಾಡಿಕೊಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಭೇಟಿ ವೇಳೆ ನಗರಸಭಾ ಸದಸ್ಯೆ ಆಶಾ ಕೃಷ್ಣನಾಯಕ(ವಾರ್ಡ್ ನಂ.2), ಪೌರಾಯುಕ್ತೆ ಕೆ.ಮಾನಸ, ಎಇಇ ಶರ್ಮಿಳಾ, ಎಇ ಲೋಕೇಶ್, ಶಿವಕುಮಾರ್, ಆರ್.ಐ.ಸಿದ್ದಯ್ಯ, ಆರ್.ಒ. ಮಧುಸೂದನ್, ಸೊಹೈಲ್ ಸೇರಿದಂತೆ ನಿವಾಸಿಗಳು ಇದ್ದರು. ಇದೇ ವೇಳೆ ಬಿ ಖಾತಾ ಆಂದೋಲನ ಮುಂದುವೆರೆದಿದ್ದು, ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು ಕೋರಿ ಅರಿವು ಮೂಡಿಸಲಾಯಿತು. ಮೂರು ದಿನಗಳ ಹಿಂದೆ ಸುರಿದ ಮಳೆಗೆ ಹಾನಿಗೀಡಾದ ಮನೆಗಳನ್ನು ಪರಿಶೀಲಿಸಿ ಅಧಿಕಾರಿಗಳು ಮಾಹಿತಿ ದಾಖಲಿಸಿಕೊಂಡರು.