ಜಿಲ್ಲೆ

ನಾಡು ನುಡಿ ಕಟ್ಟುವ ಕಾಯಕ ನಿರಂತರವಾಗಿರಲಿ

ಲಲಾಟಾಕ್ಷ ಎಸ್

ಅರಕಲಗೂಡು: ಕನ್ನಡದ ಉಸಿರಾಗಿದ್ದ ಅ.ನ.ಕೃಷ್ಣರಾಯರ ಆಶಯದಂತೆ ನಾಡು ನುಡಿ ಕಟ್ಟುವ ಕಾಯಕ ನಿರಂತರವಾಗಿ ಸಾಗಬೇಕು ಎಂದು ಹಿರಿಯ ಸಾಹಿತಿ ಶಾ.ಮಂ.ಕೃಷ್ಣರಾಯರ ಅಭಿಪ್ರಾಯಪಟ್ಟರು.


ಪಟ್ಟಣದ ಶಿಕ್ಷಕರ ಭವನದಲ್ಲಿ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ ಅಭಿಮಾನಿಗಳ ಬಳಗ ಹಾಗೂ ತಾಲೂಕು ಕಸಾಪ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಅನಕೃ ಒಂದು ನೆನಪು ಕಾರ್ಯಕ್ರಮದಲ್ಲಿ 2024-25 ನೇ ಸಾಲಿನ ಅನಕೃ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ನಾನು ಸಾಹಿತ್ಯಕವಾಗಿ ಹಾಗೂ ಕನ್ನಡಪರ ಕೆಲಸ ಮಾಡಲು ಪ್ರೇರೇಪಣೆ ನೀಡಿದ್ದು ಅನಕೃ ಅವರು. ಪ್ರೌಢಶಾಲೆಯಲ್ಲಿದ್ದಾಗ ಅವರು ಬರೆದ ನಾಟಕದ ಕೃತಿಯನ್ನು ಅಭಿನಯಿಸಲು ಅನುಮತಿ ಕೇಳಿ ಪತ್ರ ಬರೆಯುವ ಮೂಲಕ ಅನಕೃ ಪರಿಚಯವಾದರು. ಮುಂದೆ ಬಹಳಷ್ಟು ಕಾಲ ಅವರ ಸಂಪರ್ಕದಲ್ಲಿದ್ದು ಸ್ಫೂರ್ತಿ ಪಡೆದು ಕನ್ನಡದ ಕಾಯಕದಲ್ಲಿ ತೊಡಗಿಸಿಕೊಂಡೆ ಎಂದು ತಮ್ಮ ಹಾಗೂ ಅನಕೃ ಒಡನಾಟದ ದಿನಗಳನ್ನು ಮೆಲುಕು ಹಾಕಿದರು.


ಬೆಂಗಳೂರಿನ ಅನಕೃ ಪ್ರತಿಷ್ಠಾನ ಪ್ರತಿ ವರ್ಷ 50 ಸಾವಿರ ರೂ. ಮೊತ್ತದ ಸಾಹಿತ್ಯಿಕ ಪ್ರಶಸ್ತಿ ನೀಡುತ್ತಾ ಬಂದಿದೆ. ಮುಂದಿನ ವರ್ಷದಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅರಕಲಗೂಡಿನಲ್ಲಿ ನಡೆಸಲು ನಿರ್ಧರಿಸಿದ್ದು, ಇಲ್ಲಿಯೇ ಎರಡೂ ಸಮಾರಂಭಗಳನ್ನು ಒಟ್ಟಿಗೆ ಆಯೋಜಿಸಲಾಗುದು ಎಂದು ಘೋಷಿಸಿದರು.


ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ಕನ್ನಡದ ಕಟ್ಟಾಳು ಅನಕೃ ಅವರು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಅಪಾರ ಓದುಗ ಬಳಗವನ್ನು ಸೃಷ್ಟಿಸಿದ್ದಲ್ಲದೆ ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಸಿದವರು. ಕನ್ನಡದ ಗಾಯಕರಿಗೆ, ಕೃತಿಗಳಿಗೆ ಅವಕಾಶ ನೀಡದ ತಾರತಮ್ಯ ಖಂಡಿಸಿ ತಮ್ಮ ಅಣ್ಣನೆ ಆಯೋಜಕರಾಗಿದ್ದರೂ ಲೆಕ್ಕಿಸದೆ ಪ್ರತಿಭಟನೆ ನಡೆಸಿ ಕನ್ನಡದ ಕೃತಿ ಹಾಗೂ ಗಾಯಕರಿಗೆ ಮನ್ನಣೆ ಸಿಗುವಂತೆ ಮಾಡಿದ ದಿಟ್ಟ ಹೋರಾಟಗಾರರಾಗಿದ್ದರು. ಶಾ.ಮಂ.ಕೃಷ್ಣರಾಯರು ಗೋವಾ ಮತ್ತು ಕರ್ನಾಟಕದ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸಿದವರು. ಗೋವಾದಲ್ಲಿ ಕನ್ನಡವನ್ನು ಸಮರ್ಥವಾಗಿ ಕಟ್ಟುವ ಕಾಯಕ ನಡೆಸಿದರು ಎಂದು ಬಣ್ಣಿಸಿದರು.


ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್.ಮಲ್ಲೇಶ್‌ಗೌಡ ಮಾತನಾಡಿ, ಕನ್ನಡ ಸಾರಸ್ವತ ಲೋಕದಲ್ಲಿ ಸಮರ್ಥವಾದ ಕೃತಿಗಳ ಭಂಡಾರವೇ ಇದ್ದರೂ ಓದುಗ ವಲಯ ಇಲ್ಲದೆ ಬಡವಾಗಿರುವುದು ವಿಷಾದಕರ ಸಂಗತಿ. ಇಂದಿನ ಯುವ ಪೀಳಿಗೆ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು ಎಂದರು.


ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಮಾತನಾಡಿ, ಅನಕೃ ತವರೂರು ಅರಕಲಗೂಡು ಸಾಂಸ್ಕೃತಿಕ ಕೇಂದ್ರವಾಗಬೇಕು ಎಂಬ ಉದ್ದೇಶದಿಂದ ಕಳೆದ ಒಂದು ದಶಕದಿಂದ ಅನಕೃ ನೆನಪು ಕಾರ್ಯಕ್ರಮವನ್ನು ಕನ್ನಡದ ಹಬ್ಬದ ಮಾದರಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದರು.


ಹಿರಿಯ ಸಾಹಿತಿ ಶಾ.ಮಂ.ಕೃಷ್ಣರಾಯ ಅವರಿಗೆ 2024-25ನೇ ಸಾಲಿನ ಅನಕೃ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನಕೃ ಬದುಕು ಬರಹ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅನಕೃ ಪುತ್ರ ಅ.ಕೃ.ಗೌತಮ್, ಸೊಸೆ ಶೋಭಾ, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಟಿ.ಲೋಕೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಜಿನ್ನಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮುನ್ನ ಸಾಹಿತಿ ಶಾ.ಮಂ.ಕೃಷ್ಣರಾಯ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ನಡೆಸಲಾಯಿತು. ವಾದ್ಯ ವೃಂದಗಳು ಮೆರವಣಿಗೆಗೆ ಮೆರುಗು ನೀಡಿದವು.