ಜಿಲ್ಲೆ

ಸಮಾನತೆಯ ಸಮಾಜ ನಿರ್ಮಾಣವಾಗಲಿ

ಜಿ.ಹೆಚ್. ಧನ್ಯಕುಮಾರ್

ಕಡೂರು: ನಾನು ಎಂಬುದನ್ನು ತೊಡೆದು ಎಲ್ಲರೂ ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣಗೊಳ್ಳಬೇಕು ಎಂಬುದು ಕನಕದಾಸರ ಆಶಯವಾಗಿತ್ತು ಎಂದು ಬಿಜೆಪಿ ಮಂಡಲ ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ತಿಳಿಸಿದರು.

ಕರಿಕಲ್ಲಹಳ್ಳಿ ಗ್ರಾಮದಲ್ಲಿ ಕನಕ ಯುವಕ ಸಂಘ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂದಿನ ಕಾಲಘಟ್ಟದಲಿದ್ದ ಜಾತಿವ್ಯವಸ್ಥೆಯನ್ನು ತೊಡೆದು ಹಾಕಿ ದೇವರ ದೃಷ್ಠಿಯಲ್ಲಿ ನಾವೆಲ್ಲರೂ ಒಂದೇ ಎಂದು ತಮ್ಮ ಕೀರ್ತನೆಗಳ ಮೂಲಕ ಅರಿವು ಮೂಡಿಸಿದವರು ಕನಕದಾಸರು. ಇಂದಿಗೂ ಅವರ ಚಿಂತನೆಗಳು ಪ್ರಸ್ತುತ. ಸಂಗೀತ, ಸಾಹಿತ್ಯ ಲೋಕಕ್ಕೆ ಲೋಕಕ್ಕೆ ಅವರ ಕೊಡುಗೆ ಅಪಾರ. ರಾಮಧಾನ್ಯ ಚರಿತೆ ಗ್ರಾಮೀಣರಿಗೆ ಅತ್ಯಂತ ಆಪ್ತ ಕೃತಿ. ಕನಕದಾಸರ ಮಂಡಿಗೆಗಳು ಜೀವನಾನುಭವ ಮತ್ತು ಪಾರಮಾರ್ಥಿಕ ಸತ್ಯದ ಪ್ರತೀಕಗಳಾಗಿವೆ ಎಂದು ಬಣ್ಣಿಸಿದರು.

ಕನಕದಾಸರ ಕರೆಗೆ ಓಗೊಟ್ಟು ಒಡಮೂಡಿದ ಕನಕರಾಯಸ್ವಾಮಿ ಕಡೂರಿನಲ್ಲಿರುವುದು ನಮ್ಮೆಲ್ಲರ ಹೆಮ್ಮೆ.ಅಂತರಂಗದ ಕರೆಗೆ ದೇವರು ಒಲಿಯುತ್ತಾನೆಂದು ಪ್ರತ್ಯಕ್ಷ ತೋರಿದ ಸ್ಥಳ ಕನಕರಾಯನ ಗುಡ್ಡ. ಕನಕರ ಅನುಯಾಯಿಗಳಿಗೆ ಅದು ಪುಣ್ಯ ಸ್ಥಳ ಎಂದರು.

ಸಂಘದ ಅಧ್ಯಕ್ಷ ಗೋವಿಂದಪ್ಪ , ನಿಡಘಟ್ಟ ಲೋಕೇಶ್, ನಿವೃತ್ತ ಪ್ರಾಚಾರ್ಯ ತಿಮ್ಮಯ್ಯ, ಬಿ.ಟಿ.ಅಜ್ಜಯ್ಯ, ಮೋಹನ್,ಮಲ್ಲೇಶಪ್ಪ, ಅಜೇಯ,ಕುಮಾರ್, ಎತ್ತಿನಮನೆ ಸಚಿನ್ ಮತ್ತಿತರಿದ್ದರು.