ಜಿಲ್ಲೆ

ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ವಿುಸಿ

ಹಿರೇಕೆರೂರ: ಬೇಸಿಗೆ ಪ್ರಾರಂಭವಾಗಿದ್ದು, ಕೃಷಿ ಹೊಂಡದಲ್ಲಿ ಮಕ್ಕಳು ಈಜಲು ಮತ್ತು ಜಾನುವಾರುಗಳು ನೀರು ಕುಡಿಯಲು ಬಂದ ಸಂದರ್ಭದಲ್ಲಿ ಬೀಳುವ ಸಂಭವವಿದೆ. ಆದ್ದರಿಂದ ರೈತರು ಹೊಂಡದ ಸುತ್ತಲೂ ಸುರಕ್ಷತಾ ಕ್ರಮ ಅಳವಡಿಸಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ ತಿಳಿಸಿದ್ದಾರೆ.

ಕೃಷಿ ಭಾಗ್ಯ ಯೋಜನೆಯಡಿ ನಿರ್ವಿುಸಲಾದ ಕೃಷಿ ಹೊಂಡಗಳಿಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸದೆ ಇರುವುದರಿಂದ ಕೃಷಿ ಹೊಂಡಗಳಲ್ಲಿ ಜೀವ ಹಾನಿಯಾಗುವ ಸಂಭವವಿರುತ್ತದೆ. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ಅಳವಡಿಸುವುದು ಕಡ್ಡಾಯ. ಕೃಷಿ ಹೊಂಡದ ಮುಂದೆ ‘ಅಪಾಯ ಮತ್ತು ಈಜಬಾರದು’ ಎಂಬ ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕಬೇಕು.

ಕೃಷಿ ಹೊಂಡಗಳಲ್ಲಿ ಸುರಕ್ಷತೆ ಕ್ರಮವಾಗಿ ಹಗ್ಗದೊಂದಿಗೆ ಟೂಬ್​ಗಳನ್ನು ನಾಲ್ಕು ಮೂಲೆಗಳಲ್ಲಿ ಇಳಿ ಬಿಡಬೇಕು. ಈ ನಿಟ್ಟಿನಲ್ಲಿ ರೈತರು ತಮ್ಮ ಜಮೀನಿನಲ್ಲಿರುವ, ಮನೆಯ ಸಮೀಪವಿರುವ, ರಸ್ತೆ ಪಕ್ಕದಲ್ಲಿರುವ ಎಲ್ಲ ಕೃಷಿ ಹೊಂಡಗಳಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.