ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಮನ್ ಸ್ವಯಂ ಸೇವಕರು ಸೇರಿದಂತೆ ಇತರರು ಇದ್ದರು. 
ಜಿಲ್ಲೆ

ಮಾನವ ಸರಪಳಿ ನಿರ್ಮಿಸಿ ಮಾನಸಿಕ ಆರೋಗ್ಯ ಅರಿವು

ಬೇಲೂರು: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಟೆಲಿ ಮಾನಸ್ ಸಹಯೋಗದೊಂದಿಗೆ ನಮನ್ ಯೋಜನೆಯಿಂದ ಶ್ರೀ ಚನ್ನಕೇಶ್ವರಸ್ವಾಮಿ ದೇಗುಲದಿಂದ ಮೆರವಣಿಗೆಯಲ್ಲಿ ತೆರಳಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಲಾಯಿತು.

ಬೇಲೂರಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ ಮಾತನಾಡಿ, ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಕೊಠಡಿ ಸಂಖ್ಯೆ 54ರಲ್ಲಿ ನಮನಾ ಕಾರ್ಯಕ್ರಮದ ಮನೋ ವೈದ್ಯರ ತಂಡವಿರುತ್ತದೆ. ಅಲ್ಲಿ ಸಾರ್ವಜನಿಕರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಬಹುದಾಗಿದೆ. ಜತೆಗೆ ರಾಷ್ಟ್ರೀಯ ಟೆಲಿ ಮಾನಸ ಸೇವೆ 14416 ಸಂಖ್ಯೆಗೆ ಕರೆ ಮಾಡುವುದರ ಮೂಲಕ ಉಚಿತ ಆಪ್ತ ಸಮಾಲೋಚನೆ ಸಹ ಪಡೆಯಬಹುದು ಎಂದರು.

ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ದಿನನಿತ್ಯ ವ್ಯಾಯಾಮ, ಯೋಗ, ಧ್ಯಾನ ಇತ್ಯಾದಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಆಡಳಿತ ವೈದ್ಯಾಧಿಕಾರಿ ಡಾ.ಸುಧಾ, ಗ್ರೇಡ್-2 ತಹಶೀಲ್ದಾರ್ ಅಶೋಕ್‌ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಚಂದ್ರಶೇಖರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.