ಜಿಲ್ಲೆ

ಶಿಕ್ಷಣಕ್ಕೆ ಒತ್ತು ನೀಡಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಿ

ಕಿರಣ್ ಗೌಡ.ಜಿ

ಹೊಳೆನರಸೀಪುರ: ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಹಾಸನದ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಅಬ್ದುಲ್ ಬಶೀರ್ ಸಲಹೆ ನೀಡಿದರು.

ಪಟ್ಟಣದ ಜೆಎಂ ಶಾದಿ ಮಹಲ್‌ನಲ್ಲಿ ಎಪಿಜೆ ಅಬ್ದುಲ್‌ಕಲಾಂ ಮುಸ್ಲಿಂ ನೌಕರರ ಸಂಘ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ನಮ್ಮ ಸಮುದಾಯ ಮುಖ್ಯವಾಹಿನಿಗೆ ಬರಲು ಶಿಕ್ಷಣ ಅಗತ್ಯವಾಗಿದೆ. ಮಕ್ಕಳಿಗೆ ಪಾಲಕರು ಒಳ್ಳೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಪ್ರಗತಿಗೆ ಪೂರಕವಾಗಬೇಕು. ಸದ್ಯ ಅಕ್ಷರ ಕಲಿಯದವರ ಸಂಖ್ಯೆ ಇಳಿಮುಖವಾಗಿದೆ. ಹಾಗೆಯೇ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯು ಹೆಚ್ಚಾದರೆ ಒಳಿತು ಎಂದರು. ನಮ್ಮ ದೇಶದ ಅಭ್ಯುದಯಕ್ಕೆ ನಾವು ಶಿಕ್ಷಣ ಪ್ರಗತಿಯೊಂದಿಗೆ ಸಾಗೋಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಮಲ್ಲೇಶ್‌ಗೌಡ ಮಾತನಾಡಿ, ಸಮಾಜದಲ್ಲಿ ಕೆಳ ಹಂತದ ಸಮುದಾಯದವರು ಪ್ರಗತಿ ಪಥದತ್ತ ಸಾಗಬೇಕು. ಆಗ ಮಾತ್ರ ಸಮಾಜದಲ್ಲಿ ಸಮಾನ ಅವಕಾಶ ಪಡೆಯಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಕಾರ್ಯ ಸ್ವಾಗತಾರ್ಹ ಎಂದರು.

ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಎಪಿಜೆ ಅಬ್ದುಲ್‌ಕಲಾಂ ಮುಸ್ಲಿಂನೌಕರರ ಸಂಘದ ಅಧ್ಯಕ್ಷ ಸೈಯದ್ ಖಾದ್ರಿ, ಉಪ ಖಜಾನೆ ಅಧಿಕಾರಿ ಜಾಫರ್‌ಶರೀಫ್, ತೌಫಿಕ್ ಅಹಮದ್, ಉಪನ್ಯಾಸಕ ಫಯಾಜ್ ಪಾಷ ಇತರರು ಇದ್ದರು.