ನರಗುಂದ: ರಸ್ತೆ ದಾಟುತ್ತಿದ್ದ ಎಮ್ಮೆಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಎಮ್ಮೆ ಗಂಭೀರವಾಗಿ ಗಾಯಗೊಂಡು ನರಳಿ-ನರಳಿ ಪ್ರಾಣ ಬಿಟ್ಟ ಮನಕಲಕುವ ಘಟನೆ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ. ನಗರದ ಸೋಮಾಪುರ ಬಡಾವಣೆಯ ರತ್ನವ್ವ ಹಾಲಿಗೇರಿ ಅವರ 50 ಸಾವಿರ ರೂಪಾಯಿ ಮೌಲ್ಯದ ತುಂಬು ಗರ್ಭ ಧರಿಸಿದ್ದ ಎಮ್ಮೆಯನ್ನು ಎಂದಿನಂತೆ ಗುರುವಾರ ಬೆಳಗ್ಗೆ ಮೇಯಲು ಬಿಡಲಾಗಿತ್ತು. ಗುರುವಾರ ಸಂಜೆ ಮನೆಗೆ ಹೋಗದ ಎಮ್ಮೆ ಶುಕ್ರವಾರ ಬೆಳಗಿನ ಜಾವ ಮನೆಗೆ ತೆರಳಲು ರಸ್ತೆ ದಾಟುವಾಗ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ. ಗರ್ಭಿಣಿ ಎಮ್ಮೆ ರಸ್ತೆ ಪಕ್ಕದಲ್ಲಿ ಬಿದ್ದು ನರಳಾಡುವುದನ್ನು ಕಂಡ ರತ್ನವ್ವ ಕಣ್ಣೀರು ಹಾಕಿದರು.