ಜಿಲ್ಲೆ

ಕಾಡಾನೆ ದಾಳಿಗೆ ಬೆಳೆ ಹಾನಿ

Kolar

 ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿ ಗಡಿಭಾಗದ ಮೂತನೂರು ತಮಟಮಾಕನಹಳ್ಳಿಯಲ್ಲಿ ಸೋಮವಾರ ಕಾಡನೆ ದಾಳಿಗೆ ಟೊಮ್ಯಾಟೊ, ರಾಗಿ ಸೇರಿ ಹಲವು ಬೆಳೆ ನಾಶವಾಗಿವೆ.

ಮೂತನೂರಿನ ರೈತ ಗೋವಿಂದಪ್ಪ ಎಂಬುವವರ ತೋಟಕ್ಕೆ ನುಗ್ಗಿ ಎರಡು ಎಕರೆ ಟೊಮ್ಯಾಟೊ, ರಾಗಿಯನ್ನು ಹಾಳು ಮಾಡಿವೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿನತ್ತ ಓಡಿಸಲು ಹರಸಾಹಸ ಪಡುತ್ತಿದ್ದು. 32 ಕಾಡಾನೆಗಳು ತಮಟಮಾಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಮೂತನೂರು ಬಳಿ ಭಾನುವಾರ ರಾತ್ರಿ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೋಗಿ ಬರುತ್ತಿದ್ದ ಬೂದಿಕೋಟೆ ಜನರ ಕಾರಿಗೆ ಕಾಡಾನೆಗಳು ಅರ್ಧ ಗಂಟೆಗೂ ಹೆಚ್ಚು ಅಡ್ಡಲಾಗಿ ನಿಂತಿವೆ. ಪ್ರತಿದಿನ ಭಯದಲ್ಲೇ ದಿನ ದೂಡುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ಲುಹಳ್ಳಿ ಗ್ರಾಮದ ರೈತ ವೆಂಕಟೇಶ್ ಮತ್ತು ಪೋಸ್ಟ್ ಮಾಸ್ಟರ್ ಗೋವಿಂದಪ್ಪಗೆ ಸೇರಿದ ರಾಗಿ ಬೆಳೆ, ಮುನಿವೆಂಕಟಪ್ಪ ಅವರು ಬೆಳೆದ ರಾಗಿ ತೆಗೆ, ಗೊಡಗಮಂದೆ ರೈತ ರಮೇಶ್ ಅವರು ಬೆಳೆದ ಸೌತೆಕಾಯಿ, ಗ್ಲೊಹಳ್ಳಿ ರೈತ ರಾಮಪ್ಪ ಬೆಳೆದ ರಾಗಿ ತೆನೆಯನ್ನು ನಾಶ ಮಾಡಿವೆ.