ಜಿಲ್ಲೆ

ಬೂದಿಕೋಟೆ ಸಮೀಪದ ಭುವನಹಳ್ಳಿ ವ್ಯಾಪ್ತಿಯಲ್ಲಿ ಆನೆ ದಾಳಿಯಿಂದ ಅಪಾರ ಬೆಳೆ ನಾಶ

Kolar

ಬೂದಿಕೋಟೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸಮೀಪದ ಭುವನಹಳ್ಳಿ ವ್ಯಾಪ್ತಿಯ ತೋಟಗಳಿಗೆ ಬುಧವಾರ ರಾತ್ರಿ 10ಕ್ಕೂ ಹೆಚ್ಚು ಕಾಡಾನೆಗಳು ದಾಳಿ ಮಾಡಿ ಅಪಾರ ಪ್ರಮಾಣದ ಕಲ್ಲಂಗಡಿ, ಟೊಮ್ಯಾಟೊ, ಕೋಸು, ರಾಗಿ ಸೇರಿ ಹಲವು ಬೆಳೆ ನಾಶ ಮಾಡಿವೆ.

ತಮಿಳುನಾಡು ಅರಣ್ಯ ಪ್ರದೇಶದಿಂದ ಆಹಾರ ಮತ್ತು ನೀರು ಅರಸಿ ಆನೆಗಳು ಬಂದಿದ್ದು, ಗ್ರಾಮದ ರೈತರಾದ ಸಂತೋಷ್, ರಾಜಪ್ಪ, ಚಿನ್ನಪ್ಪ ಬೆಳೆದಿದ್ದ ಕಲ್ಲಂಗಡಿ ಹಣ್ಣು, ಮುನಿರಾಜು ಅವರಿಗೆ ಸೇರಿದ ಟೊಮ್ಯಾಟೊ, ನಾರಾಯಣಸ್ವಾಮಿಗೆ ಸೇರಿದ ಕೋಸು, ಮಂಜು ಅವರು ಬೆಳೆದ ಸೌತೆಕಾಯಿ, ಮುನಿವೆಂಕಟಪ್ಪ ಹಾಗೂ ಚಿಕ್ಕಪ್ಪಯ್ಯ ಅವರ ರಾಗಿತೆನೆ ಮತ್ತು ಮೆದೆಯನ್ನು ತಿಂದು ಹಾಕಿವೆ.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಗ್ರಾಮಕ್ಕೆ ಭೇಟಿ ನೀಡಿ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸುವ ಪ್ರಯತ್ನ ಮಾಡಿದ್ದಾರೆ.

ಹಲವು ದಿನಗಳಿಂದ ಬೂದಿಕೋಟೆ ಹೋಬಳಿ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ಬೀಡು ಬಿಟ್ಟಿರುವ 20ಕ್ಕೂ ಹೆಚ್ಚು ಕಾಡಾನೆಗಳು ಬೆಳೆಗಳನ್ನೆಲ್ಲಾ ನಾಶ ಮಾಡಿ ಹೋಗುತ್ತಿವೆ. ಬೆಳೆ ನಷ್ಟದ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದರೂ ನಷ್ಟ ಪರಿಹಾರ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಅಧಿಕಾರಿಗಳು ಕೂಡಲೆ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.