ಮೈಸೂರು: ಜಾತಿ ವ್ಯವಸ್ಥೆ, ವರ್ಣಾಶ್ರಮದಿಂದ ಮನುಷ್ಯ ಮನುಷ್ಯನನ್ನು ಶೋಷಿಸುವ ಅಸಮಾನತೆ ಸೃಷ್ಟಿಯಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೈಶಾಖ ಬುದ್ಧಪೂರ್ಣಿಮ ಹಾಗೂ ಭಗವಾನ್‌ಬುದ್ಧರ 2568ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಸಮಾನತೆ ಪೋಷಿಸುವ ಜಾತಿ ವ್ಯವಸ್ಥೆ ಅಳಿಸಲು ಬುದ್ಧ, ಬಸವ, ಅಂಬೇಡ್ಕರ್ ರೀತಿ ಹಲವು ಮಹನೀಯರು ಶ್ರಮಿಸಿದರು ಎಂದು ಸ್ಮರಿಸಿದರು.
ಮೇಲ್ಜಾತಿಯವರು ಬಡವನಾಗಿದ್ದರೂ ನಾವು ಅವರನ್ನು ಕಂಡಾಗ ಬುದ್ದಿ, ಸ್ವಾಮಿ ಅಂತ ಗೌರವಿಸುತ್ತೇವೆ. ಅದೇ ಕೆಳ ಜಾತಿಯ ವ್ಯಕ್ತಿ ಉನ್ನತ ಸ್ಥಾನಮಾನದಲ್ಲಿ ಇದ್ದರೂ ಅವರನ್ನು ಏಕವಚನದಲ್ಲಿ ಅಗೌರವದಿಂದ ಕರೆಯುತ್ತೇವೆ. ಇದೇ ಗುಲಾಮಗಿರಿ ಮನಸ್ಥಿತಿ. ಈ ಮನಸ್ಥಿತಿಯನ್ನು ಅಳಿಸಲು ಬುದ್ಧ, ಬಸವ ಅಂಬೇಡ್ಕರ್ ಸೇರಿ ಹಲವರು ಶ್ರಮಿಸಿದ್ದರು ಎಂದರು.
ಪಟ್ಟಭದ್ರ ಹಿತಾಸಕ್ತಿಗಳು ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಕಾಲದಲ್ಲೂ ಇದ್ದರು, ಈಗಲೂ ಇದ್ದಾರೆ. ಇವರು ಸಮಾಜದ ಪ್ರಗತಿಯ ಶತ್ರುಗಳು. ಆದರೆ ನಮ್ಮ ಸಂವಿಧಾನ ಎಲ್ಲ ಜಾತಿ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸಿದೆ. ಆದ್ದರಿಂದ ಸಂವಿಧಾನ ಜ್ಞಾನ ಸರ್ವರಿಗೂ ಅಗತ್ಯ ಎಂದರು.
ತಾವೊಬ್ಬರೇ ಶ್ರೇಷ್ಠರು ಎಂದು ಕರೆಸಿಕೊಳ್ಳುವವರು ಬಹಳ ಪುಕ್ಕಲರಾಗಿರುತ್ತಾರೆ. ಶ್ರೇಷ್ಠತೆಯ ವ್ಯಸನ ಹೊಂದಿದ್ದ ಹಿಟ್ಲರ್ ಲಕ್ಷಾಂತರ ಮನುಷ್ಯರ ಕೊಲೆಗೆ ಕಾರಣನಾದ. ಪುಕ್ಕಲರು ಮಾತ್ರ ತಾವೊಬ್ಬರೇ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳಲು ಒದ್ದಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ನಾವುಗಳು ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಆಗಲು ಸಾಧ್ಯವಿಲ್ಲ. ಆದರೆ ಇವರ ಹಾದಿಯಲ್ಲಾದರೂ ನಾವು ನಡೆಯಬೇಕು. ಬಸವಣ್ಣ ಅವರನ್ನು ಪೂಜಿಸುತ್ತಾ ಜಾತಿವಾದ ಮಾಡುವುದು ತಪ್ಪು. ವಿದ್ಯಾವಂತರೇ ಹೆಚ್ವು ಜಾತಿವಾದಿಗಳಾಗುತ್ತಿರುವುದು ದುರಂತದ ಸಂಗತಿ. ಆದ್ದರಿಂದ ವೈಚಾರಿಕತೆ ಮತ್ತು ಮಾನವೀಯತೆ ಇರುವ ಶಿಕ್ಷಣ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ದರು.
ದೇವರು ಯಾರ ಹಣೆಯಲ್ಲೂ ತಾರತಮ್ಯ, ಬಡತನವನ್ನು ಬರೆಯುವುದಿಲ್ಲ. ಹೀಗೆ ಬರೆದವರನ್ನು ದೇವರು ಎಂದು ಒಪ್ಪಲು ಸಾಧ್ಯವಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಹಣೆಬರಹ ಎನ್ನುವ ಮೌಢ್ಯವನ್ನು ಅಳಿಸಿ ವೈಚಾರಿಕತೆ ಬೆಳೆಸಲು ಯತ್ನಿಸಿದರು. ಆದ್ದರಿಂದ ಅಂಬೇಡ್ಕರ್ ಅವರು ಮೌಢ್ಯವಿಲ್ಲದ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದರು.
ಜಾತಿ ವ್ಯವಸ್ಥೆ ನೀರಿನ ಬಾವಿಗೆ ಬಿದ್ದ ಕಸದಂತೆ. ಕೊಡದಲ್ಲಿ ನೀರು ಸೇದುವಾಗ ಕಸ ಪಕ್ಕಕ್ಕೆ ಸರಿಯುತ್ತದೆ. ನೀರು ಸೇದಿದ ಮೇಲೆ ಮತ್ತೆ ಕಸ ತುಂಬಿಕೊಳ್ಳುತ್ತದೆ. ಆದ್ದರಿಂದ ಕಸವನ್ನೇ ನೀರಿನಿಂದ ತೆಗೆದು ಹೊರಗೆ ಹಾಕಿದರೆ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಅಸಮಾನತೆ ಅಳಿಸುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಆರ್ಥಿಕವಾಗಿ ಶಕ್ತಿ ಬಂದರೆ ಸ್ವಾಭಿಮಾನಿಗಳಾಗುತ್ತಾರೆ. ಮಹಿಳೆಯರಲ್ಲಿ, ಬಡವರಲ್ಲಿ ಆರ್ಥಿಕ ಶಕ್ತಿ ತುಂಬುವ ಮೂಲಕ ಅವರನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಆಯುಷ್ಮಾನ್ ಡಾ.ಕಲ್ಯಾಣಸಿರಿ ಭಂತೇಜಿ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬುದ್ಧವಿಹಾರದ ಕಲ್ಯಾಣಸಿರಿ ಬಂತೇಜಿ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ಎ.ಆರ್. ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಮಾಜಿ ಮೇಯರ್ ಪುರುಷೋತ್ತಮ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪಷ್ಪಾ ಅಮರ್‌ನಾಥ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹಾಗೂ ಇತರರು ಇದ್ದರು.
ಅಂಬೇಡ್ಕರ್ ಪ್ರತಿಮೆ ನಿರ್ಮಿಸಿ:
ತೆಲಂಗಾಣ ಮಾದರಿಯಲ್ಲಿ ಮೈಸೂರು-ಬೆಂಗಳೂರು ರಸ್ತೆಗೆ ಹೊಂದಿಕೊಂಡಂತೆ 10 ಎಕರೆ ಜಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 150 ಅಡಿ ಎತ್ತರದ ಪ್ರತಿಮೆ ನಿರ್ಮಿಸಿ ಅದನ್ನು ಜ್ಞಾನ ಕೇಂದ್ರವಾಗಿ ರೂಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಬೌದ್ಧ ಧರ್ಮದ ಕೇಂದ್ರವಾಗಿರುವ ನಗರದ ವಿಶ್ವಮೈತ್ರಿ ಬುದ್ಧ ವಿಹಾರ ಕೇಂದ್ರದ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ನೀಡಬೇಕು, ಬೌದ್ಧ ಧರ್ಮದ ಉನ್ನತೀಕರಣಕ್ಕಾಗಿ ಬೌದ್ಧ ಅಭಿವೃದ್ಧಿ ನಿಗಮ ರಚಿಸಬೇಕು, ಸರ್ಕಾರದ ವತಿಯಿಂದ ಬುದ್ಧ ಜಯಂತಿ ಆಚರಿಸಬೇಕು ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.