ಜಿಲ್ಲೆ

ಪುರಸಭೆ ನಿರ್ವಹಣೆಗೆ ಕಂದಾಯ ವಸೂಲಿ ಅವಶ್ಯಕ

Chitradurga - Desk - Suresh lamani

ಚನ್ನಗಿರಿ: ಪುರಸಭೆ ಉತ್ತಮವಾಗಿ ನಡೆಯಬೇಕಾದರೆ ಅದಕ್ಕೆ ಪೂರಕವಾಗಿ ಕಂದಾಯ ವಸೂಲಿ ಆಗಬೇಕು. ಇಲ್ಲದಿದ್ದರೆ ಸಿಬ್ಬಂದಿಗೆ ವೇತನ ನೀಡುವುದು ಸಹ ಕಷ್ಟವಾಗಲಿದೆ ಎಂದು ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್ ತಿಳಿಸಿದರು.

ಇಲ್ಲಿನ ಪುರಸಭೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26 ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪಟ್ಟಣದಿಂದ ಒಟ್ಟು 1.29 ಲಕ್ಷ ರೂ. ಕಂದಾಯ ವಸೂಲಿ ಆಗಬೇಕು. ಅದರಲ್ಲಿ ಶೇ.80 ರಷ್ಟು ಸಂಗ್ರಹಿಸಿದರೆ ವೇತನ ಸೇರಿ ಪುರಸಭೆಯನ್ನು ಸುಲಭವಾಗಿ ನಿರ್ವಹಿಸಬಹುದು. ಆದರೆ, ಶೇ. 40 ರಷ್ಟು ಮಾತ್ರ ವಸೂಲಿ ಆಗುತ್ತಿದ್ದು, ಇದರಿಂದ ಸಿಬ್ಬಂದಿಗೆ 10 ತಿಂಗಳಿಂದ ವೇತನ ನೀಡಲಾಗಿಲ್ಲ. ಕೆಲಸ ಮಾಡಿದವರಿಗೆ ವೇತನ ನೀಡುವ ವ್ಯವಸ್ಥೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಎಲ್ಲ ಹೋಟೆಲ್​ಗಳಿಗೆ ಕಡ್ಡಾಯವಾಗಿ ಟ್ರೇಡ್ ಲೈಸನ್ಸ್ ನೀಡಬೇಕು. 50 ಕೆಜಿಗಿಂತ ಹೆಚ್ಚು ಕಸ ಹಾಕುವ ಮಾಲೀಕರಿಂದ ಪ್ರತಿ ತಿಂಗಳು 1 ಸಾವಿರ ರೂ. ಪಡೆಯಬೇಕು. ಪರವಾನಗಿ ಇಲ್ಲದೆ ರೆವಿನ್ಯೂ ಜಾಗಗಳಲ್ಲಿ ಕಟ್ಟಡ ನಿರ್ವಿುಸಿರುವ ಮಾಲೀಕರಿಂದ ನಿಗದಿತ ಕಂದಾಯದ ಎರಡು ಪಟ್ಟು ದಂಡ ಸಮೇತ ವಸೂಲಿ ಮಾಡಬೇಕು ಎಂದರು.

ಇರುವ 25 ಸಿಬ್ಬಂದಿ ಬಳಸಿಕೊಂಡು ಬೆಳಗ್ಗೆ 6 ಗಂಟೆಯಿಂದ ಒಟ್ಟು 3 ವಾಹನದಲ್ಲಿ 23 ವಾರ್ಡ್​ಗಳಿಗೆ ತೆರಳಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಂಗ್ರಹಿಸಬೇಕು. ಮನೆ ಹೊರಗೆ ಮತ್ತು ರಸ್ತೆಗೆ ಕಸ ಎಸೆಯುವವರಿಗೆ ದಂಡ ವಿಧಿಸಬೇಕು. ಕಸ ಸಂಗ್ರಹ ವಿಲೇವಾರಿ ಘಟಕದಲ್ಲಿ ಗೊಬ್ಬರ ಮಾರಾಟದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಸದಸ್ಯ ಪಾರಿ ಪರಮೇಶ್ ಮಾತನಾಡಿ, ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಬರುತ್ತಿರುವ ಅನುದಾನ ಸದ್ಬಳಕೆ ಆಗುತ್ತಿಲ್ಲ.ಪಟ್ಟಣದಲ್ಲಿ ಅಳವಡಿಸಿದ ಎಲ್​ಇಡಿ ಬಲ್ಬ್ ಬೆಳಕು ಬೀರುತ್ತಿಲ್ಲ. 7 ನೇ ವಾರ್ಡ್​ನಲ್ಲಿ ರಾತ್ರಿ ವೇಳೆ ಮನೆಗೆ ಹಾವು ಬಂದರೂ ತಿಳಿದಿಲ್ಲ. ಅದನ್ನು ಮೊದಲು ನಿಲ್ಲಿಸಿ, ಇಲ್ಲವೇ ಸದಸ್ಯರಿಗೆ ಹಾವು ಹಿಡಿಯುವ ತರಬೇತಿ ನೀಡಿ ಎಂದರು.

ಸದಸ್ಯ ಗಾದ್ರಿರಾಜು ಮಾತನಾಡಿ, ಉಪಯೋಗಕ್ಕೆ ಬಾರದ ಪುರಸಭೆ ವಾಹನ ತುಕ್ಕು ಹಿಡಿಯುತ್ತಿದ್ದು, ಅದನ್ನು ಹರಾಜು ಮಾಡಬೇಕು ಎಂದು ಹೇಳಿದರು.

ಪಟ್ಟಣದ ಸರ್ಕಾರಿ ಆಯುರ್ವೆದ ಅಸ್ಪತ್ರೆ ಪಕ್ಕದಲ್ಲಿ ವೈನ್ ಶಾಪ್​ಗೆ ಪರವಾನಗಿ ನೀಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಂತೆ ಮೈದಾನದಲ್ಲಿ ಸಂತೆ ಮಾರುಕಟ್ಟೆ ನಿರ್ವಿುಸಲಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸಂತೆ ನಡೆಯದೆ ಕುರಿಗಳ ಮಾರಾಟ ಕೇಂದ್ರವಾಗಿದೆ. ಪುರಸಭೆಯವರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟೆಮನಿ, ವ್ಯವಸ್ಥಾಪಕ ಡಿ.ವೈ. ಆರಾಧ್ಯ, ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಮಂಜುನಾಥ್ ಹಾಗೂ ಸದಸ್ಯರು ಹಾಜರಿದ್ದರು.

ಇಂದಿರಾ ಕ್ಯಾಂಟೀನ್ ಲೋಪ ಸರಿಪಡಿಸಿ: ಪಟ್ಟಣದ ಇಂದಿರಾ ಕ್ಯಾಂಟೀನ್ ಲೋಪದೋಷ ಸರಿಪಡಿಸದಿದ್ದರೆ ಸದಸ್ಯರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಕಪ್ಪು ಪಟ್ಟಿಗೆ ಸೇರಿಸುವಂತೆ ಮಾಡಬಹುದು ಎಂದು ಹೊನ್ನಾಳಿ ಎಸಿ ಅಭಿಷೇಕ್ ತಿಳಿಸಿದರು.

ಇಂದಿರಾ ಕ್ಯಾಂಟೀನ್​ಗೆ ಅಧಿಕಾರಿಗಳ ಜತೆ ಭೇಟಿ ನೀಡಿದಾಗ ಯಾವುದೇ ವ್ಯವಸ್ಥೆ ಇಲ್ಲದಿರುವುದು ತಿಳಿಯಿತು. ಅಲ್ಲಿ ಮೊದಲು ಸಿಸಿ ಕ್ಯಾಮರಾ ಅಳವಡಿಸಬೇಕು. ಶೌಚಗೃಹ ಹಾಗೂ ಕ್ಯಾಂಟೀನ್ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಾರ್ವಜನಿಕರಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಉತ್ತಮ ಆಹಾರ ನೀಡಬೇಕು. ಮೊದಲು ಬಂದ 300 ಜನರಿಗೆ ಟೋಕನ್ ನೀಡಬೇಕು. ಇದುವರೆಗೆ ಆಗಿರುವ ಲೋಪದೋಷ ಸರಿಪಡಿಸಬೇಕು ಎಂದು ಸೂಚಿಸಿದರು.