ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ರಾಜ್ಯವನ್ನು ಆರ್ಥಿಕ ಪ್ರಗತಿಪಥದತ್ತ ಕೊಂಡುಹೋಗುವ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲದ ಸತ್ವಹೀನ ಬಜೆಟ್ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಎಲ್ಲದಕ್ಕೂ ಕೇಂದ್ರ ಸರ್ಕಾರದೆಡೆ ಬೊಟ್ಟು ಮಾಡುವುದನ್ನೇ ರೂಢಿ ಮಾಡಿಕೊಂಡಿರುವ ಮುಖ್ಯಮಂತ್ರಿ, ಅಲ್ಪಸಂಖ್ಯಾತರ ತುಷ್ಟೀಕರಣದೊಂದಿಗೆ ಓಟ್ ಬ್ಯಾಂಕ್ ರಾಜಕಾರಣದ ಲೇಪನ ಈ ಬಜೆಟ್ನಲ್ಲಿ ಎದ್ದು ಕಾಣುತ್ತಿದೆ. ಒಟ್ಟಾರೆ ಬಜೆಟ್ಗೆ ಯಾವುದೇ ಅರ್ಥಿಕ ಮೂಲತತ್ವಗಳ ಸ್ಪರ್ಶ ನೀಡುವಲ್ಲಿ ವಿಫಲರಾಗಿದ್ದಾರೆ.
ನೋಡಲು 4.9 ಲಕ್ಷ ಕೋಟಿ ರೂ. ಬೃಹತ್ ಗಾತ್ರದ ಬಜೆಟ್ ಮಂಡಿಸಿದ್ದರೂ ಸರ್ವವರ್ಗದ ಸಮಭಾವ ಹಾಗೂ ಸರ್ವಪ್ರದೇಶಗಳ ಅಭಿವೃದ್ಧಿಯ ಸಮತೋಲನ ಮಾಡಿದ್ದು ಎಲ್ಲಿಯೂ ಕಾಣುವುದಿಲ್ಲ ಎಂದು ಟೀಕಿಸಿದ್ದಾರೆ.
ರಾಜ್ಯದ ಒಟ್ಟು ಸಾಲ 8 ಲಕ್ಷ ಕೋಟಿ ರೂ.ಗೆ ಸಮೀಪಿಸಿದ್ದು, ರಾಜ್ಯ ಜಿಡಿಪಿಯ ಶೇ. 23 ರಷ್ಟಾಗಿರುವುದು ಕಳವಳಕಾರಿಯಾಗಿದೆ. ಕಂದಾಯ ವೆಚ್ಚ 3,11,400 ಲಕ್ಷ ಕೋಟಿ ರೂ., ಬಂಡವಾಳ ವೆಚ್ಚ 76,400 ಕೋಟಿ ರೂ. ಇದೆ. ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಶೆ. 14 ರಷ್ಟು ಅನುದಾನ ನೀಡಲಾಗಿದೆ. ಶಿಕ್ಷಣ ಹಾಗೂ ಆರೋಗ್ಯಕ್ಕೆ ಕ್ರಮವಾಗಿ ಶೇ. 10 ಹಾಗೂ ಶೇ. 5 ರಷ್ಟು ಅನುದಾನ ತೃಪ್ತಿಕರವಾಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಈ ಬಜೆಟ್ನಲ್ಲಿ ಗಮನಾರ್ಹ ಹಂಚಿಕೆ ಇಲ್ಲದಿರುವುದು ಆರ್ಥಿಕ ಪ್ರಗತಿಗೆ ದೊಡ್ಡ ಹೊಡೆತವಾಗಿದೆ. ರಸ್ತೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳು ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತವೆ ಮತ್ತು ಖಾಸಗಿ ಹೂಡಿಕೆಯನ್ನು ಆಕರ್ಷಿಸುತ್ತವೆ. ಆದರೆ, ಈ ಬಜೆಟ್ನಲ್ಲಿ ಇಂತಹ ಯೋಜನೆಗಳಿಗೆ ಆದ್ಯತೆ ನೀಡದಿರುವುದು ರಾಜ್ಯದ ಸ್ಪರ್ಧಾತ್ಮಕತೆಯನ್ನು ಕುಗ್ಗಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.