ಜಿಲ್ಲೆ

ಘೋಷಣೆಗೆ ಸೀಮಿತವಾದ ಬಜೆಟ್​ ಯೋಜನೆಗಳು?

Dharwada - Vikram Nadiger

ವಿಕ್ರಮ ನಾಡಿಗೇರ ಧಾರವಾಡ

ರಾಜ್ಯ ಸರ್ಕಾರ ಪ್ರತಿ ವರ್ಷ ಆಯವ್ಯಯದಲ್ಲಿ ಅನೇಕ ಹೊಸ ಹೊಸ ಯೋಜನೆ ಸೇರಿ ಅಭಿವೃದ್ಧಿ ಕಾರ್ಯಗಳನ್ನು ಘೋಷಣೆ ಮಾಡುತ್ತದೆ. ಆದರೆ ಬೆರಳೆಣಿಕೆಷ್ಟು ಯೋಜನೆಗಳು ಮಾತ್ರ ಜಾರಿಗೆ ಬರುತ್ತವೆ. ಅದೇ ರೀತಿ 2024-25ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್​ನಲ್ಲಿ ಜಿಲ್ಲೆಗೆ ಘೋಷಿಸಿದ ಯೋಜನೆಗಳ ಕಥೆಯೂ ಆಗಿದೆ.

2024ರಲ್ಲಿ ಮಂಡಿಸಿದ ಆಯವ್ಯಯದಲ್ಲಿ ಜಿಲ್ಲೆಗೆ ಕೆಲ ಯೋಜನೆಗಳನ್ನು ಘೋಷಿಸಲಾಗಿತ್ತು. ಅವುಗಳಲ್ಲಿ ವಾಲ್ಮಿ ಸಂಸ್ಥೆಯನ್ನು ಸೆಂಟರ್​ ಆಫ್ ಎಕ್ಸಲೆನ್ಸ್​ ಇನ್​ ವಾಟರ್​ ಮ್ಯಾನೇಜ್​ಮೆಂಟ್​ ಆಗಿ ಉನ್ನತಿಕರಣ, ಬೆಣ್ಣೆಹಳ್ಳದಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ತಡೆಗೋಡೆಗಳ ನಿರ್ಮಾಣ, 20 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಡೇ ಕೇರ್​ ಕಿಮೋಥೆರಪಿ ಕೇಂದ್ರ ಸ್ಥಾಪನೆ, ಹುಬ್ಬಳ್ಳಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ ಹಾಗೂ ಹುಬ್ಬಳ್ಳಿ ಕೃಷಿ ಮಾರುಕಟ್ಟೆಯನ್ನು ಶೂನ್ಯ ತ್ಯಾಜ್ಯ ಮಾರುಕಟ್ಟೆಯಾಗಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್​ಜಿ ಪ್ಲಾಂಟ್​ ಸ್ಥಾಪನೆ ಮಾಡುವುದು ಪ್ರಮುಖ ಘೋಷಣೆಗಳಾಗಿದ್ದವು.

ಆಯವ್ಯದಲ್ಲಿ ಹೇಳಿದಂತೆ ಯಾವ ಘೋಷಣೆಗಳೂ ಪೂರ್ಣಗೊಂಡಿಲ್ಲ. ಕೆಲವು ಕಾರ್ಯರೂಪಕ್ಕೆ ಬಂದಿದ್ದರೂ ಅನುದಾನ ಕೊರತೆ ಎದುರಿಸುತ್ತಿವೆ. ಇನ್ನೂ ಕೆಲವು ಜಾರಿಗೆ ಬರುವಲ್ಲೇ ವಿಳಂಬವಾಗಿವೆ. ಸರ್ಕಾರ ಘೋಷಿಸಿದ ಯೋಜನೆಗಳು ಸಮಯಕ್ಕೆ ಸರಿಯಾಗಿ ಕಾರ್ಯರೂಪಕ್ಕೆ ಬಂದಿವೆಯೇ? ಎಂದು ಗಮನಿಸುವುದು ಶಾಸಕರ ಕರ್ತವ್ಯ. ಆದರೆ ಬಜೆಟ್​ ಸಮಯದಲ್ಲಿ ಜಿಲ್ಲೆಗೆ ಯೋಜನೆ ಘೋಷಣೆ ಮಾಡಿಸಿದ್ದೇನೆ ಎಂದು ಕ್ರೆಡಿಟ್​ ಪಡೆಯಲು ಹರಸಾಹಸ ಪಡುವ ಶಾಸಕರು, ನಂತರದಲ್ಲಿ ಅವುಗಳ ಬಗ್ಗೆ ಲಕ್ಷ್ಯ ವಹಿಸುತ್ತಿಲ್ಲ ಎನ್ನುವುದಕ್ಕೆ ಇದು ನಿದರ್ಶನ.

ಕಳೆದ ವರ್ಷ ಘೋಷಣೆ ಮಾಡಿದಂತೆ ವಾಲ್ಮಿ ಸಂಸ್ಥೆಯನ್ನು ಉನ್ನತಿಕರಿಸಲಾಗಿದೆ. ಅದಕ್ಕೆ ತಕ್ಕಂತೆ ವಾಲ್ಮಿ ನಿರ್ದೇಶಕ ಬಸವರಾಜ ಬಂಡಿವಡ್ಡ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡುವ ಭರವಸೆ ಅವರಲ್ಲಿ ಮೂಡಿದೆ. ಇದರ ಜತೆಗೆ ಜಲ ವಿಶ್ವ ವಿದ್ಯಾಲಯ ಸ್ಥಾಪನೆಗೆ ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಕಿಮೋಥೆರಪಿ ಕೇಂದ್ರ ಸ್ಥಾಪನೆ ಸಹ ವಿಳಂಬವಾಗಿದೆ. ಕೇಂದ್ರ ಸ್ಥಾಪನೆಗೆ ಟೆಂಡರ್​ ಕರೆಯಲಾಗಿತ್ತು. ಆದರೆ ಯಾರೊಬ್ಬರೂ ಪಾಲ್ಗೊಂಡಿಲ್ಲ. ಹೀಗಾಗಿ ಇದೀಗ ಒಡಂಬಡಿಕೆ (ಎಂಓಯು) ಮೂಲಕ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದಾರೆ. ಇನ್ನೂ 10-15 ದಿನಗಳಲ್ಲಿ ಒಡಂಬಡಿಕೆ ಪ್ರಕ್ರಿಯೆ ರ್ಪೂಣವಾಗಲಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ.

ಹುಬ್ಬಳ್ಳಿ ಎಪಿಎಂಸಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬಯೋ ಸಿಎನ್​ಜಿ ಪ್ಲಾಂಟ್​ಗೆ ಇಲಾಖೆಯ ಕೇಂದ್ರ ಕಚೇರಿಯಿಂದಲೇ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಈ ಅವಧಿಯಲ್ಲೇ ಘೋಷಣೆ ಮಾಡಿರುವ ಉಳಿದ ಜಿಲ್ಲೆಗಳಿಗೆ ಅನುಮೋದನೆ ಸಿಕ್ಕಿದೆ. ಆದರೆ ಹುಬ್ಬಳ್ಳಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಮೇರು ನಂದನ ತಿಳಿಸಿದ್ದಾರೆ.

ಬೆಣ್ಣೆಹಳ್ಳದಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ತಡೆಗೋಡೆಗಳ ನಿರ್ಮಾಣ ಕಾರ್ಯವೂ ಆರಂಭವಾಗಿಲ್ಲ. ಕಾಮಗಾರಿ ಪ್ರಕ್ರಿಯೆ ಆರಂಭಿಸಲು ಟೆಂಡರ್​ ಕರೆಯಲಾಗಿದ್ದು, ಇನ್ನೂ ಕೆಲ ದಿನಗಳಲ್ಲಿ ಆದ್ಯತೆ ಮೇರೆಗೆ (ಹೆಚ್ಚು ಹಾನಿಗೀಡಾಗುವ ಪ್ರದೇಶಗಳಲ್ಲಿ ಮೊದಲು) ಆರಂಭವಾಗಲಿದೆ. ಇನ್ನು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದ ಯಾವ ಪ್ರಕ್ರಿಯೆ ಸಹ ನಡೆದಿಲ್ಲ.

ಒಂದು ವರ್ಷದ ಹಿಂದೆ ಸರ್ಕಾರ ಮಂಡಿಸಿದ ಆಯವ್ಯಯದಲ್ಲಿ ಘೋಷಣೆಯಾದ ಯೋಜನೆಗಳೇ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಇದೀಗ ಮತ್ತೊಂದು ಬಜೆಟ್​ ಮಂಡನೆಗೆ ಸರ್ಕಾರ ಮುಂದಾಗಿದೆ. ಇದರಲ್ಲೂ ಹಲವು ಘೋಷಣೆಗಳಾಗಲಿವೆ. ಈ ಎರಡೂ ಬಜೆಟ್​ಗಳಲ್ಲಿನ ಯೋಜನೆಗಳನ್ನು ಸರ್ಕಾರ ಮುತುವರ್ಜಿ ವಹಿಸಿ ಜಾರಿಗೆ ತರುವಲ್ಲಿ ಪ್ರಯತ್ನಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.