ಜಿಲ್ಲೆ

ರೈತರಿಗೆ ಬಜೆಟ್ ಗಿಫ್ಟ್? ಡೀಸೆಲ್​ಗೆ ಸಬ್ಸಿಡಿ ನೀಡಲು ಕೃಷಿ ಇಲಾಖೆ ಚಿಂತನೆ

ಬೆಂಗಳೂರು: ರೈತರಿಗೆ ಸಿಹಿ ಸುದ್ದಿ ಕೊಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಹೆಜ್ಜೆ ಇಟ್ಟಿದೆ. ಕೃಷಿಕರು ಬಳಸುವ ಡೀಸೆಲ್​ಗೆ ಸಬ್ಸಿಡಿ ನೀಡುವ ಸಂಬಂಧ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರಸ್ತಾವನೆ ಸಿದ್ಧಪಡಿಸಿದ್ದು, ಮುಖ್ಯಮಂತ್ರಿಗಳ ಮನವೊಲಿಸುವ ಕಸರತ್ತು ನಡೆಸಿದ್ದಾರೆ.

ಪ್ರತಿ ಎಕರೆ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಲು ವರ್ಷಕ್ಕೆ ಕನಿಷ್ಠ 25 ಲೀಟರ್ ಡೀಸೆಲ್ ಬೇಕಾಗುತ್ತದೆ. ಇದಕ್ಕೆ ವರ್ಷಕ್ಕೊಮ್ಮೆ ಪ್ರತಿ ಲೀಟರ್​ಗೆ 25 ರೂ. ಸಬ್ಸಿಡಿ ನೀಡಬೇಕು ಎನ್ನುವುದು ಮೂಲ ಚಿಂತನೆ. ಗರಿಷ್ಠ 10 ಎಕರೆ ತನಕ ರೈತರು ಬಳಸುವ ಡೀಸೆಲ್​ಗೆ ಸಬ್ಸಿಡಿ ಕೊಡುವುದರಿಂದ 48 ಲಕ್ಷ ರೈತರಿಗೆ 1300 ಕೋಟಿ ರೂ. ಬಜೆಟ್ ನೆರವು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಟ್ರಾ್ಯಕ್ಟರ್ ಇದ್ದವರಿಗೆ ಸಬ್ಸಿಡಿ ಕೊಡಬೇಕೆಂದೇನು ಇಲ್ಲ. ಭೂಮಿ ಹೊಂದಿರುವ ರೈತರಿಗೆ ಈ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಸಚಿವ ಪಾಟೀಲ್ ಅವರ ಚಿಂತನೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಅದಕ್ಕೆ ಅನುಮೋದನೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಯೋಜನೆ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಸದ್ಯದ ಆರ್ಥಿಕ ಸಂಕಷ್ಟದಲ್ಲಿ ಅನುದಾನ ಕಲ್ಪಿಸುವುದು ಕಷ್ಟ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಈ ಯೋಜನೆ ಪ್ರಯೋಜನ ಪಡೆಯಲು ಭೂಮಿಯ ಮಿತಿಯನ್ನು ಗರಿಷ್ಠ 5 ಎಕರೆ ತನಕ ಎಂದು ನಿಗದಿ ಮಾಡಿ ಸಬ್ಸಿಡಿ ಪ್ರಮಾಣ ಕಡಿಮೆ ಮಾಡುವ ಮೂಲಕ ಅನುದಾನ ಗಾತ್ರ ತಗ್ಗಿಸಬಹುದು ಎನ್ನುವ ಸಲಹೆ ನೀಡಲಾಗಿದೆ.

ಮೀನುಗಾರರು ಬಳಸುವ ಸೀಮೆಎಣ್ಣೆ, ಡೀಸೆಲ್​ಗೆ ಸಬ್ಸಿಡಿ ಕೊಡುತ್ತಿರುವ ಮಾದರಿಯಲ್ಲಿಯೇ ಈ ಯೋಜನೆಯನ್ನು ಜಾರಿಗೆ ತಂದಲ್ಲಿ ಯಡಿಯೂರಪ್ಪ ಅವರ ಹೆಸರು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ಶೀಘ್ರ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.