ಜಿಲ್ಲೆ

ಜಿಲ್ಲೆಯ ಜನರ ನಿರೀಕ್ಷೆ ಹೆಚ್ಚಿಸಿದ ರಾಜ್ಯ ಬಜೆಟ್

ಸುನಿಲ್ ಪೊನ್ನೇಟಿ

ಮಡಿಕೇರಿ:

’ಸುಮಾರು ೨ ದಶಕಗಳ ನಂತರ ಕಾಂಗ್ರೆಸ್‌ಗೆ ಬಾಗಿಲು ತೆಗೆದ ಕೊಡಗಿಗೆ ಸಿಎಂ ಸಿದ್ದರಾಮಯ್ಯ ಏನು ಕೊಡುಗೆ ಕೊಡಬಹುದು ?’ ಶುಕ್ರವಾರ (ಜು.೭) ಮಂಡನೆ ಆಗುತ್ತಿರುವ ರಾಜ್ಯ ಬಜೆಟ್ ಬಗ್ಗೆ ಜಿಲ್ಲೆಯ ಜನತೆಯ ನಿರೀಕ್ಷೆ ಇದು. ಕಾಫಿ ಪ್ರಧಾನ ಬೆಳೆಯಾಗಿರುವ ಪುಟ್ಟ ಜಿಲ್ಲೆ ಪ್ರಾಕೃತಿಕ ಸಂಪತ್ತಿನಿಂದ ಶ್ರೀಮಂತವಾಗಿದ್ದರೂ ಅಭಿವೃದ್ಧಿ ವಿಷಯದಲ್ಲಿ ಹಿಂದುಳಿದಿದೆ ಎನ್ನುವುದು ಸ್ಥಳೀಯರ ಸಾರ್ವತ್ರಿಕ ಅಭಿಪ್ರಾಯ. ನೂತನವಾಗಿ ಆಯ್ಕೆ ಆಗಿರುವ ಇಬ್ಬರು ಶಾಸಕರು ಕೂಡ ಚುನಾವಣೆ ವೇಳೆ ಅಭಿವೃದ್ಧಿ ಮಂತ್ರವನ್ನೇ ಜಪಿಸಿದ್ದರು. ಹೊಸ ಸರ್ಕಾರದ ಮೊದಲ ಬಜೆಟ್ ಈ ನಿಟ್ಟಿನಲ್ಲಿ ಎಷ್ಟು ಪೂರಕವಾಗಿದೆ ಎನ್ನುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.

ಕೊಡಗಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇದೆ. ಈ ಕಾಲೇಜಿಗೆ ಸಂಬಂಧಿಸಿದಂತೆ ಬೋಧಕ ಆಸ್ಪತ್ರೆಯೂ ಮೊದಲಿನ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ತುರ್ತು ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದೂರದ ಮೈಸೂರು, ಮಂಗಳೂರು ಅಥವಾ ಬೆಂಗಳೂರಿಗೆ ಹೋಗುವ ಅನಿವಾರ್ಯತೆ ತಪ್ಪಿಸಲು ಇನ್ನೂ ಸಾಧ್ಯವಾಗಿಲ್ಲ. ಮಡಿಕೇರಿಗೆ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಂದರೆ ಈ ಸಂಕಷ್ಟಕ್ಕೆ ಪರಿಹಾರ ಸಿಗಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ. ಮೂಲತಃ ವೈದ್ಯರೇ ಆಗಿರುವ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೂಡ ಇದಕ್ಕೆ ಧ್ವನಿಗೂಡಿಸಿರುವುದರಿಂದ ಈ ಬೇಡಿಕೆಗೆ ಬಜೆಟ್‌ನಲ್ಲಿ ಸ್ಪಂದನೆ ಸಿಗುವ ಬಗ್ಗೆ ಕೊಡಗಿನವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪಶ್ಚಿಮಘಟ್ಟದ ಸೆರಗಿನಲ್ಲಿ ಇರುವ ಜಿಲ್ಲೆಯಲ್ಲಿ ಶೇ.೩೩ ರಷ್ಟು ಅರಣ್ಯ ಪ್ರದೇಶ ಇದೆ. ವಿಶ್ವ ಪ್ರಸಿದ್ಧ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ತಲಕಾವೇರಿ ವನ್ಯಜೀವಿ ವಲಯ, ಬ್ರಹ್ಮಗಿರಿ ಅಭಯಾರಣ್ಯ, ಪುಷ್ಪಗಿರಿ ಅಭಯಾರಣ್ಯ.. ಹೀಗೆ ಜಿಲ್ಲೆ ಅರಣ್ಯದಿಂದ ಸುತ್ತುವರಿದಿದ್ದು, ಕಾಡು ಪ್ರಾಣಿಗಳ ನಿರಂತರ ಹಾವಳಿಯಿಂದ ಇಲ್ಲಿಯ ರೈತ ನೆಮ್ಮದಿಯಿಂದ ಕೃಷಿ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಕಾಡಾನೆ ಹಾವಳಿ ಸಾಮಾನ್ಯ ಎಂಬಂತಾಗಿದ್ದು ಇದರ ಜತೆಗೆ ಹುಲಿ, ಕಾಡುಕೋಣ, ಕೋತಿ ಸೇರಿದಂತೆ ವಿವಿಧ ಪ್ರಾಣಿಗಳು ಮಾನವ ಜೀವಹಾನಿ, ಬೆಳೆನಷ್ಟಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ, ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಬೇಕು ಎನ್ನುವುದು ಇಲ್ಲಿಯ ಬೆಳೆಗಾರರು, ರೈತರ ಹಳೆಯ ಬೇಡಿಕೆ. ಇದಕ್ಕೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕೂಡ ಸ್ಪಂದಿಸಿದ್ದರು. ಆನೆ, ಮಾನವ ಸಂಘರ್ಷಕ್ಕೆ ಪರಿಹಾರ ಹುಡುಕುವಲ್ಲಿ ಶ್ರಮಿಸುತ್ತಿರುವ ಸಂಕೇತ್ ಪೂವಯ್ಯ ಕೂಡ ಈಗ ಕಾಂಗ್ರೆಸ್‌ನಲ್ಲಿ ಇದ್ದಾರೆ. ಹಾಗಾಗಿ ಬಜೆಟ್‌ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡ ನಿರೀಕ್ಷೆ ಇದೆ.

ಕೊಡಗು ಮಳೆಯ ತವರೂರಿನಂತೆ ಇರುವ ಜಿಲ್ಲೆ. ವರ್ಷದ ೬ ತಿಂಗಳು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆ ಸುರಿಯುತ್ತಲೇ ಇರುತ್ತದೆ. ಹಾಗಾಗಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳು ಸತತವಾಗಿ ಹಾನಿಗೆ ಒಳಗಾಗುತ್ತಿರುತ್ತಿದೆ. ಸಿಗುವ ಅಲ್ಪ ಸ್ವಲ್ಪ ಅನುದಾನಗಳಿಂದ ಗುಣಮಟ್ಟದ ಕಾಮಗಾರಿಗಳು ನಡೆಯದೆ ಬೇಸಿಗೆಯಲ್ಲಿ ನಡೆದ ಕೆಲಸಗಳು ಒಂದು ಮಳೆಗಾಲ ಕಳೆಯುತ್ತಿದ್ದಂತೆಯೇ ನೀರು ಪಾಲಾಗಿರುತ್ತದೆ. ಹಾಗಾಗಿ ಕೊಡಗನ್ನು ವಿಶೇಷವಾಗಿ ಪರಿಗಣಿಸಿ ದೊಡ್ಡ ಮೊತ್ತದ ಪ್ಯಾಕೇಜ್ ಘೋಷಿಸಬೇಕು ಎನ್ನುವ ಬೇಡಿಕೆಯೂ ಇದೆ. ಹಲವಾರು ವೇದಿಕೆಗಳಲ್ಲೂ ಈ ವಿಷಯ ಪ್ರಸ್ತಾಪ ಆಗಿದ್ದು, ಸರ್ಕಾರದ ಹಂತಕ್ಕೆ ತಲುಪಿಸುವ ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಆಗುವ ಸಾಧ್ಯತೆಗಳ ಬಗ್ಗೆ ಕಾಂಗ್ರೆಸ್ ವಲಯದಲ್ಲೂ ಚರ್ಚೆ ನಡೆದಿದೆ.

ಕೊಡಗಿನಲ್ಲಿ ಉಗಮವಾಗುವ ಕಾವೇರಿ ಕರ್ನಾಟಕ, ತಮಿಳುನಾಡು ಪಾಲಿನ ಜೀವ ನದಿಯೂ ಹೌದು. ಆದರೆ ಇತ್ತೀಚಿನ ವರ್ಷಗಳಲ್ಲಿ ಜಲಾನಯನ ಪ್ರದೇಶದಲ್ಲಿ ನಿರಂತರ ಮರ ಹನನ ಮತ್ತಿತರ ಕಾರಣಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬರುತ್ತಿಲ್ಲ. ಇದು ನದಿಯಲ್ಲಿನ ನೀರಿನ ಪ್ರಮಾಣದ ಮೇಲೂ ಪರಿಣಾಮ ಬೀರಿದೆ. ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಹಲವು ರೀತಿಯಲ್ಲಿ ನಡೆಯುತ್ತಿರುವ ಪ್ರಕೃತಿಗೆ ವಿರುದ್ಧವಾದ ಚಟುವಟಿಕೆಗಳು ಕಾವೇರಿಗೆ ಮಾರಕವಾಗಿದೆ. ನದಿ ದಂಡೆಯ ಗ್ರಾಮಗಳು, ಪಟ್ಟಣಗಳ ಕೊಳಚೆ ನೀರು ಯಾವುದೇ ರೀತಿಯಲ್ಲಿ ಸಂಸ್ಕರಣೆ ಆಗದೆ ಕಾವೇರಿಗೆ ಸೇರುತ್ತಿದೆ. ಒಂದೊಮ್ಮೆ ನೇರವಾಗ ಬೊಗಸೆಯಲ್ಲಿ ಕುಡಿಯಬಹುದಾಗಿದ್ದ ನದಿ ನೀರು ಈಗ ಕೊಡಗಿನ ಗಡಿದಾಟುವಾಗಲೇ ಸ್ನಾನಕ್ಕೂ ಯೋಗ್ಯವಲ್ಲದ ನೀರಾಗಿ ಪರಿವರ್ತನೆ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪುನಶ್ಚೇತನಕ್ಕೆ ಸಮಗ್ರ ಯೋಜನೆ ರೂಪಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಬಜೆಟ್‌ನಲ್ಲಿ ಈ ವಿಷಯ ಪ್ರಸ್ತಾಪ ಆಗಬಹುದು ಎನ್ನುವ ನಿರೀಕ್ಷೆ ಜಿಲ್ಲೆಯ ಜನತೆಯಲ್ಲಿದೆ.