ಜಿಲ್ಲೆ

ಹುಟ್ಟಿದ ನೆಲದಲ್ಲೇ ಬೌದ್ಧಧಮ್ಮಕ್ಕೆ ನೆಲೆಯಿಲ್ಲ

ಮೈಸೂರು: ಜಗತ್ತಿನ ಎಲ್ಲೆಡೆ ಬೌದ್ಧಧಮ್ಮ ಪಸರಿಸಿದೆ. ಆದರೆ ಭಾರತದ ಮಣ್ಣಿನಲ್ಲಿ ಹುಟ್ಟಿದ ಈ ಧಮ್ಮಕ್ಕೆ ಇಲ್ಲಿ ನೆಲೆ ಇಲ್ಲದಂತಾಗಿದೆ ಎಂದು ವಿಚಾರವಾದಿ, ಹಿರಿಯ ವಕೀಲ ಎನ್.ಬಿ.ಶಿವರುದ್ರಪ್ಪ ಕಳವಳ ವ್ಯಕ್ತಪಡಿಸಿದರು


ಕರ್ನಾಟಕ ಬುದ್ಧಧಮ್ಮ ಸಮಿತಿ ವತಿಯಿಂದ ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಬುದ್ಧವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಧಮ್ಮ ದೀಕ್ಷಾ ದಿನಾಚರಣೆ(ಧಮ್ಮ ಚಕ್ಕ ಪವತ್ತನ ದಿನ)ಕಾರ್ಯಕ್ರಮದಲ್ಲಿ ಬುದ್ಧರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.


ದೇವರು ಮತ್ತು ಆತ್ಮ ಈ ಎರಡೂ ವಿಚಾರಗಳಿಂದ ಜನರನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಇದು ಇಂದಿನ ದೊಡ್ಡ ಸವಾಲಾಗಿ ಕಾಡುತ್ತಿದ್ದು, ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಲಾಗದೆ ಜನರು ಪರಿತಪಿಸುತ್ತಿದ್ದಾರೆ ಎಂದರು.


ಮಾನವನ ಬದುಕನ್ನು ಬಂಧನದಿಂದ ಬಿಡಿಸಿ, ಜ್ಞಾನವನ್ನು ಸಾರಿದ ದಿನವೇ ಧಮ್ಮ ಚಕ್ಕಪವತ್ತನ ದಿನ. ಮನಸ್ಸಿನಲ್ಲಿರುವ ಕಳೆಯನ್ನು ತೆಗೆದು ಪರಿಶುದ್ಧ ಮಾಡಿಕೊಳ್ಳಬೇಕಾಗಿದೆ. ಇಂದಿನ ಯುವಪೀಳಿಗೆಗೆ ಜ್ಞಾನ ತುಂಬುವ ಕೆಲಸವಾಗಬೇಕಿದೆ. ಪ್ರತಿಯೊಬ್ಬರೂ ಬುದ್ಧರ ಮಾರ್ಗದಲ್ಲಿ ನಡೆಯಬೇಕು. ಈ ಮೂಲಕ ಬದುಕಿನಲ್ಲಿ ಬದಲಾವಣೆ ಕಾಣಬೇಕು ಎಂದರು.


ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಪ್ಪ ಮಾತನಾಡಿ, ಶುದ್ಧವಾದ ನೀರಿನಲ್ಲಿ ಪ್ರತಿಬಿಂಬ ಕಾಣುವಂತೆ ಬುದ್ಧರ ವಿಚಾರದಲ್ಲಿ ಅಷ್ಟೇ ಸ್ಪಷ್ಟತೆ ಇದೆ. ಬುದ್ಧಧಮ್ಮವು ಸರಳ ಮತ್ತು ಕ್ಲಿಷ್ಟಕರವಾಗಿದೆ. ಮೊಟ್ಟ ಮೊದಲು ಜಗತ್ತಿನ ಜ್ಞಾನದ ಬಾಗಿಲನ್ನು ತೆರೆದವರು ಬುದ್ಧ ಗುರು. ಜಗತ್ತಿನ ಇಲ್ಲ ಜೀವಿಗಳೂ ಒಂದನ್ನೊಂದು ಪರಸ್ಪರ ಅವಲಂಬಿಸಿವೆ. ಆದ್ದರಿಂದ ಆಷಾಢದ ಕತ್ತಲೆಗೆ ಹುಣ್ಣಿಮೆಯ ಬೆಳಕಿನ ಸ್ಪರ್ಶ ನೀಡಿದ ಕರುಣಾಮೂರ್ತಿ ಬುದ್ಧರು ಎಂದರು.
ಇಂದಿನ ದಿನಗಳಲ್ಲಿ ಗುರು ಮಠಗಳೇ ಕತ್ತಲೆಯಲ್ಲಿ ಇರುವುದರಿಂದ ಜನರಿಗೆ ಜ್ಞಾನವನ್ನು ತುಂಬುವ ಕೆಲಸಗಳು ನಡೆಯುತ್ತಿಲ್ಲ. ಆದ್ದರಿಂದ ಜನಸಮಾನ್ಯರಿಗೆ ಜ್ಞಾನವನ್ನು ತುಂಬುವ ಮಠಗಳು ಪ್ರಸ್ತುತ ಅನಿವಾರ್ಯವಾಗಿವೆ. ಶಿಷ್ಯರನ್ನು ಹುಡುಕಿಕೊಂಡು ಹೋಗಿ ಮೊಟ್ಟ ಮೊದಲ ಬಾರಿಗೆ ಜ್ಞಾನವನ್ನು ಬೋಧಿಸಿದವರು ಬುದ್ಧ ಗುರು ಎಂದರು.


ಕರ್ನಾಟಕ ಬುದ್ಧಧಮ್ಮ ಸಮಿತಿ ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ ಮಾತನಾಡಿ, ಮೌಢ್ಯದ ಬಂಧನದಿಂದ ಜನರು ಹೊರಬರಬೇಕು. ಸತ್ಯದ ಮಾರ್ಗದಲ್ಲಿ ನಡೆದಾಗ ಮಾತ್ರ ಬದುಕು ಹಸನಾಗುತ್ತದೆ. ಅಮಲು ಬರುವ ವಸ್ತುಗಳನ್ನು ಸೇವಿಸಬಾರದು. ಇವು ಜೀವನಕ್ಕೆ ಮಾರಕವಾಗಿವೆ. ಇವು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತವೆ. ಇವುಗಳನ್ನು ತ್ಯಜಿಸಿ ಅಂಬೇಡ್ಕರ್ ಮತ್ತು ಬುದ್ಧರು ತೋರಿಸಿದ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು


ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ಚಂದ್ರಶೇಖರಯ್ಯ, ಎಂ.ಸಾವಕಯ್ಯ , ನಿವೃತ್ತ ಇಂಜಿನಿಯರ್ ಆರ್.ನಟರಾಜು, ಸಮಿತಿಯ ಸಹ ಕಾರ್ಯದರ್ಶಿ ಎಚ್.ಶಿವರಾಜ್, ಡಾ.ಎಸ್.ಪ್ರೇಮ್‌ಕುಮಾರ್, ವಕೀಲ ರಾಜು ಹಂಪಾಪುರ, ನಿಸರ್ಗ ಸಿದ್ದರಾಜು, ಪಿ.ನಿರಂಜನ್, ಡಾ.ವಿ.ಷಣ್ಮುಗಂ, ಮಲ್ಲಿಕಾರ್ಜುನ ಸ್ವಾಮಿ, ಡಾ.ಮಂಜು ಸತ್ತಿಗೆಹುಂಡಿ, ಕೃಷ್ಣಮೂರ್ತಿ, ಬಿ.ಎಂ.ಲಿಂಗರಾಜು, ಮಹಾದೇವಸ್ವಾಮಿ, ಮಾ.ನಾಗಯ್ಯ, ಲಿಂಗಣ್ಣಯ್ಯ , ಬಿ.ಗಾಯತ್ರಿದೇವಿ, ಎಂ.ಆರ್.ಪ್ರೇಮಲತಾ, ವೆಂಕಟೇಶ್, ವಿಶಾಲ್, ಸಚಿನ್ ಗುಂಡ್ಲುಪೇಟೆ ಇದ್ದರು


ಫೋಟೋ *1: ನಗರದಲ್ಲಿ ಆಯೋಜಿಸಿದ್ದ ಧಮ್ಮ ಚಕ್ಕಪವತ್ತನ ದಿನಾಚರಣೆ ಕಾರ್ಯಕ್ರಮದಲ್ಲಿ ಎನ್.ಬಿ.ಶಿವರುದ್ರಪ್ಪ, ಪ್ರೊ.ಡಿ.ನಂಜುಂಡಯ್ಯ, ಡಾ.ಡಿ.ಚಂದ್ರಶೇಖರಯ್ಯ, ಎಂ.ಸಾವಕಯ್ಯ , ಆರ್.ನಟರಾಜು, ಎಚ್.ಶಿವರಾಜ್, ಡಾ.ಎಸ್.ಪ್ರೇಮ್‌ಕುಮಾರ್, ವಕೀಲ ರಾಜು ಹಂಪಾಪುರ ಇನ್ನಿತರರಿದ್ದರು.