ಕನಕಗಿರಿ: ನಾಡಿನಲ್ಲಿ ಶತಮಾನಗಳ ಕಾಲದಿಂದಲೂ ಸುಳ್ಳುಗಳಿಂದ ಜನರನ್ನು ನಂಬಿಸಿ ಅಂಧಾಕಾರದಲ್ಲಿರುವಂತೆ ಮಾಡಲಾಗಿದೆ ಎಂದು ಕರ್ನಾಟಕದ ಜನಕವಿ ರಮೇಶ್ ಗಬ್ಬೂರ್ ಹೇಳಿದರು.
ಪಟ್ಟಣದ 8ನೇ ವಾರ್ಡ್‌ನ ಛಲವಾದಿ ಓಣಿಯಲ್ಲಿರುವ ಛಾಯಾಗ್ರಾಹಕ ಮೌನೇಶ್ ಅವರ ಮನೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬುದ್ಧನೆಡೆಗೆ ನಮ್ಮ ನಡೆ ಎರಡನೇ ಧಮ್ಮ ದೀಪ ಕಾರ್ಯಕ್ರಮದಲ್ಲಿ ಮಾತನಾಡಿ, ಕತ್ತಲೆಯಿಂದ ಬೆಳಕಿನ ಕಡೆ ಬರಬೇಕಾದರೆ ಬುದ್ಧನ ಧಮ್ಮ ದೀಪದ ಕಡೆ ನಾವೆಲ್ಲರೂ ಹೋಗಬೇಕಿದೆ ಎಂದರು.
ಗಜಲ್ ಕವಿ ಅಲ್ಲಾಗಿರಿರಾಜ ಮಾತನಾಡಿ, ಬುದ್ಧನ ತತ್ವಗಳು ನಮ್ಮ ಬದುಕಿಗೆ ಆದರ್ಶವಾಗಬೇಕು. ಬುದ್ಧನ ಅಹಿಂಸಾ ತತ್ವ ಇಂದಿಗೂ ಪ್ರಸ್ತುತ. ನಮ್ಮ ದೇಶದ ಗಣ್ಯರು ಹೊರ ದೇಶಕ್ಕೆ ತೆರಳಿದ ಸಂದರ್ಭದಲ್ಲಿ ನಾನು ಬುದ್ಧನ ನಾಡಿನಿಂದ ಬಂದವನೆಂದು ಹೇಳುತ್ತಾರೆ. ಇದನ್ನು ನಾವು ಎಂದಿಗೂ ಮರೆಯಬಾರದು ಎಂದರು.
ಚಿಂತಕ ಲಿಂಗಣ್ಣ ಜಂಗಮರದಳ್ಳಿ ಮಾತನಾಡಿ, ಬುದ್ಧನ ಪಂಚಶೀಲ ತತ್ವಗಳನ್ನ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ. ಪಟ್ಟಭದ್ರ ಹಿತಾಸಕ್ತಿಗಳು ದೇವರು, ಧರ್ಮದ ಹೆಸರಿನಲ್ಲಿ ಭಯ ಹುಟ್ಟಿಸುವ ಮೂಲಕ ಮೂಲ ನಿವಾಸಿ ದಲಿತ, ಹಿಂದುಳಿದ ವರ್ಗಗಳ ಮಿದುಳಿನ ಮೇಲೆ ಬೀಗ ಜಡಿದಿದ್ದಾರೆ. ಇದರಿಂದ ಈ ವರ್ಗ ಹೊರಬರಲಾಗದೆ ಒದ್ದಾಡುತ್ತಿವೆ ಎಂದರು.
ಗಂಗಾವತಿ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ, ಶಿಕ್ಷಕ ಶೇಖರ್ ನಾಯ್ಕ, ಪಪಂ ಸದಸ್ಯ ನೂರ್‌ಸಾಬ್ ಗಡ್ಡಿಗಾಲ್, ಹುಸೇನಪ್ಪ ಹಂಚಿನಾಳ, ಡಿಎಸ್‌ಎಸ್ ಸಂಚಾಲಕರಾದ ಪಾಮಣ್ಣ ಅರಳಿಗನೂರು, ನೀಲಕಂಠ ಬಡಿಗೇರ್, ನಾಗೇಶ ಪೂಜಾರ್, ಮರಿಸ್ವಾಮಿ, ಡಾ.ಪಾರ್ವತಿ, ಖಾದರ್‌ಬಾಷಾ ಗುಡಿಹಿಂದ್ಲರ್, ಮುಕ್ತುಮ್‌ಸಾಬ್ ಚಳ್ಳಮರದ್ ಇತರರಿದ್ದರು.