ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದಶಕಗಳಿಂದೀಚೆಗೆ ಮೂರು ಬಾರಿ ಉತ್ಖನನ ಕಂಡು ತೆರೆಮರೆಗೆ ಸರಿದಿದ್ದ ದೊಡ್ಡಬಳ್ಳಾಪುರ ತಾಲೂಕು ರಾಘಘಟ್ಟ ಗ್ರಾಮದ ಬೂದಿಗುಂಡಿಯಲ್ಲಿ ಮತ್ತೊಮ್ಮೆ ಬೌದ್ಧನೆಲೆ ಉತ್ಖನಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಉತ್ಸುಕತೆ ತೋರಿದೆ.
ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಯೋಗದಲ್ಲಿ ಜು.16ರಂದು ಬೆಳಗ್ಗೆ 11ಗಂಟೆಗೆ ಬೌದ್ಧನೆಲೆಯ ಕುರಿತಾದ ಉತ್ಖನನ ಚಾಲನೆ ದೊರೆಯಲಿದೆ. ಈಗಾಗಲೇ ಹಲವು ಐತಿಹಾಸಿನ ತಾಣಗಳಿಂದ ದೇಶದ ಗಮನ ಸೆಳೆದಿರುವ ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸದ ಗತವೈಭವವನ್ನು ಬೆಳೆಕಿಗೆ ತರುವ ಪ್ರಯತ್ನ ಇದಾಗಿದೆ.
2500 ವರ್ಷಗಳ ಇತಿಹಾಸ: ಸುಮಾರು 2500 ವರ್ಷಗಳ ಹಿಂದಿನ ಇತಿಹಾಸ ಕೆದಕುವ ಪ್ರಯತ್ನ ನಡೆಯಲಿದೆ, 2004ರಲ್ಲಿ ಮೊದಲ ಬಾರಿಗೆ ಉತ್ಖನನಕ್ಕೆ ಚಾಲನೆ ನೀಡಲಾಯಿತು. ಆಗ ಕೆಲವೊಂದು ಭೌದ್ಧ ಪ್ರತಿಮೆಗಳು, ಸ್ಥೂಪಗಳು, ಚಿನ್ನದನಾಣ್ಯ, ಶಿವಲಿಂಗ. ಶಿಲಾಶಾಸನಗಳು ಸೇರಿ ಹಲವು ಪುರಾವೆಗಳು ಪತ್ತೆಯಾಗಿದ್ದವು. ಸುಮಾರು 15 ಅಡಿ ಆಳದಷ್ಟು ಭೂಮಿಯಲ್ಲಿ ಹುದುಗಿರುವ ಬೌದ್ಧನೆಲೆಯ ವಸ್ತುಗಳ ಶೋಧನೆ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ನಂತರದಲ್ಲಿ ಎರಡು ಬಾರಿ ಚಾಲನೆ ದೊರೆಯಿತಾದರೂ ಅದನ್ನು ಮುಂದುವರೆಸುವ ಪ್ರಯತ್ನ ನಡೆಯಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಜಘಟ್ಟದಲ್ಲಿ ಪತ್ತೆಯಾದ ಬೌದ್ಧ ನಿವೇಶನ ನೆಲೆ, ಬೌದ್ಧ ಚೈತಾಲಯ ಮತ್ತು ಹಲವು ಅವಶೇಷಗಳು ಉತ್ತರ ಕರ್ನಾಟಕ ಸನ್ನತಿ, ಬ್ರಹ್ಮಗಿರಿ, ಚಂದ್ರವಳ್ಳಿಯ ಸಿಕ್ಕ ಅವಶೇಷಗಳಿಗೆ ಹೊಲಿಕೆಯಾಗುತ್ತಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ. ದಕ್ಷಿಣ ಕರ್ನಾಟಕ ವ್ಯಾಪ್ತಿಯಲ್ಲಿ ರಾಜಘಟ್ಟ ಗ್ರಾಮದಲ್ಲಿ ಅಪರೂಪದ ಬೌದ್ಧ ನಿವೇಷನ ನೆಲೆ ಮತ್ತು ಬೌದ್ಧ ಚೈತಾಲಯದ ಅವಶೇಷಗಳು ಪತ್ತೆಯಾಗಿದೆ.
ಉತ್ಖನನ ಜಾಗವೀಗ ಕೃಷಿಭೂಮಿ: ಪ್ರವಾಸೋದ್ಯಮ ಇಲಾಖೆ ಬೌದ್ಧನೆಲೆ ಉತ್ಖನನಕ್ಕೆ ಮುಂದಾಗಿರುವ ಸ್ಥಳ ಇದೀಗ ಕೃಷಿಭೂಮಿಯಾಗಿದೆ, ಹಣ್ಣು, ತಕರಾರಿ, ಹೂವು, ದ್ರಾಕ್ಷಿ ಸೇರಿ ರಾಗಿ ಮತ್ತಿತರ ಧಾನ್ಯಗಳನ್ನು ಬೆಳೆಯುವ ಜಮೀನುಗಳಾಗಿ ಪರಿವರ್ತನೆಯಾಗಿವೆ. ಇದು ಉತ್ಖನನಕ್ಕೆ ಬಹಳ ಅಡೆತಡೆ ತಂದೊಡ್ಡಲಿದೆ ಎಂಬ ಮಾತು ಕೇಳಿಬರುತ್ತಿದೆ. ಸರ್ಕಾರ ಉತ್ಖನನಕ್ಕೆ ಮುಂದಾದಲ್ಲಿ ಹಲವು ಎಕರೆ ಪ್ರದೇಶ ಬಳಕೆ ಮಾಡಬೇಕಾಗುತ್ತದೆ ಇದಕ್ಕೆ ರೈತರಿಂದ ತೀವ್ರ ಪ್ರತಿರೋಧ ಎದುರಾಗಲಿದೆ. ರೈತರನ್ನು ಹೇಗೆ ಮನವೊಲಿಸಿ ಉತ್ಖನನ ನಡೆಯಲಿದೆ ಎಂಬ ಕುತೂಹಲ ಕಾಯ್ದುಕೊಂಡಿದೆ.
ಜಮೀನುಗಳಲ್ಲಿ ಇಟ್ಟಿಗೆಗಳು: ಬೌದ್ಧರ ಕಾಲದಲ್ಲಿ ನಿರ್ಮಾಣಕ್ಕೆ ಬಳಸುತ್ತಿದ್ದರು ಎನ್ನಲಾದ ಇಟ್ಟಿಗೆಗಳು ಇಂದಿಗೂ ಅನೇಕ ಜಮೀನುಗಳಲ್ಲಿ ಪತ್ತೆಯಾಗುತ್ತಿವೆ, ಕೇವಲ ನಾಲ್ಕೈದು ಅಡಿ ಆಳ ತೋಡಿದರೆ ಬೌದ್ಧರ ಕಾಲದ್ದು ಎನ್ನಲಾದ ಅಪರೂಪದ ಇಟ್ಟಿಗೆಗಳು ಕಂಡುಬರುತ್ತಿವೆ. ಇವುಗಳನ್ನು ಹೊರತೆಗೆಯಲು ಜಮೀನುಗಳಲ್ಲಿ ಭೂಮಿ ಅಗೆಯಬೇಕಾದ ಅನಿವಾರ್ಯತೆ ಎದುರಾಗಲಿದೆ.
ಹೊಲಗಳಿಗೆ ಬೂದಿ: ಈ ಮೊದಲು ರಾಜಘಟ್ಟದ ಇದೇ ಸ್ಥಳವನ್ನ ಬೂದಿಗುಂಡಿ ಎಂದು ಗ್ರಾಮಸ್ಥರು ಕರೆಯುತ್ತಿದ್ದರು. ಈ ಸ್ಥಳದಲ್ಲಿ ಬೂದಿಯನ್ನು ರೈತರು ತಮ್ಮ ಹೊಲಗಳಿಗೆ ಸಾಗಿಸುವ ಮೂಲಕ ಉತ್ತಮ ಬೇಸಾಯ ಮಾಡುತ್ತಿದ್ದರು. ಇದು ಇತಿಹಾಸಕಾರರ ಗಮನ ಸೆಳೆಯಿತು. ಇಂತಹ ಸ್ಥಳಗಳು ಮೊದಲಿಗೆ ನಗರಗಳಾಗಿದ್ದು ಅನಂತರ ಶತ್ರುಗಳ ದಾಳಿಗೆ ಒಳಗಾಗಿ ಅವನತಿ ಹೊಂದಿದವು ಎಂಬುದು ಇತಿಹಾಸಕಾರರ ಅಭಿಪ್ರಾಯವಾಗಿದೆ, ಇದೇ ಕಾರಣಕ್ಕೆ ಇತಿಹಾಸಕಾರರು ಈ ಸ್ಥಳದಲ್ಲಿ ಉತ್ಖನನ ಆರಂಭಿಸಲು ಮುಂದಾಗಲಾಗಿದೆ ಎನ್ನಲಾಗಿದೆ.
ಸಚಿವರಿಂದ ಉದ್ಘಾಟನೆ: ಕಾನೂನು ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಡಾ.ಎಚ್.ಕೆ ಪಾಟೀಲ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕದಲ್ಲಿ ಬೌದ್ಧಕಲೆ ಮತ್ತು ಸಂಸ್ಕೃತಿ ಎಂಬ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಬಿಡುಗಡೆ ಮಾಡಲಿದ್ದಾರೆ. ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಸಿಇಒ ಡಾ.ಕೆ.ಎನ್.ಅನುರಾಧಾ ಮತ್ತಿತರರು ಭಾಗವಹಿಸಿದ್ದಾರೆ.
ರಾಜಘಟ್ಟ ವ್ಯಾಪ್ತಿಯಲ್ಲಿ ಬೌದ್ಧನೆಲೆಯ ಸಾಕಷ್ಟು ಕುರುಹುಗಳು ಪತ್ತೆಯಾಗಿವೆ, ಈ ಹಿಂದೆ ಮೂರು ಬಾರಿ ಉತ್ಖನನ ನಡೆದಿದೆ. ಈ ಬಾರಿಯೂ ಇಲಾಖೆ ಉತ್ಸುಕತೆ ತೋರಿರುವುದು ದೊಡ್ಡಬಳ್ಳಾಪುರ ತಾಲೂಕಿನ ಗತಕಾಲ ಇತಿಹಾಸ ಮತ್ತೆ ಮುನ್ನೆಲೆಗೆ ಬರಲು ಸಾಧ್ಯವಾಗಲಿದೆ. ಈ ಭಾಗದಲ್ಲಿ ಪಂಚಲಿಂಗಗಳ ಮಾಹಿತಿ ಇದೆ ಈಗಾಗಲೇ 2 ಲಿಂಗಗಳು ಪತ್ತೆಯಾಗಿವೆ. ಚಿನ್ನದ ನಾಣ್ಯ ಮತ್ತಿತರ ಬೌದ್ಧರ ಕಾಲಕ ಸಾಕಷ್ಟು ಅವಶೇಷಗಳು ಪತ್ತೆಯಾಗಿವೆ.
ರಾಜಘಟ್ಟ ರವಿ, ಕರವೇ ಪ್ರಧಾನ ಕಾರ್ಯದರ್ಶಿ ದೊಡ್ಡಬಳ್ಳಾಪುರ
--------