ವಿಜಯಪುರ: ಬುದ್ಧ ಎಂದರೆ ದೇವರಲ್ಲ, ಬುದ್ಧ ಎಂದರೆ ಅರಿವಿನ, ಜ್ಞಾನದ ಬೆಳಕು. ಮೂಢ ನಂಬಿಕೆಗಳಿಂದ ಹೊರಬಂದು ಅರಿವಿನ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಬುದ್ಧವಿಹಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಧಮ್ಮಚಕ್ರ ಪರಿವರ್ತನ ದಿನಾಚರಣೆ ಹಾಗೂ ವರ್ಷಾವಾಸ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
2500 ವರ್ಷಗಳ ಹಿಂದೆಯೇ ಜೂಜಾಟ, ಸುರಾಪಾನ, ಪ್ರಾಣಿಬಲಿ ಮುಂತಾದ ಅನಿಷ್ಟಗಳ ಮೂಲಕ ಸಮಾಜವು ನೈತಿಕವಾಗಿ ಅಧಃಪತನಗೊಂಡಿದ್ದ ಮತ್ತು ದೇವರನ್ನು ಒಲಿಸಿಕೊಳ್ಳಲು ಮೌಢ್ಯವೆಂಬ ಅಂಧಃಕಾರದಲ್ಲಿ ಮುಳುಗಿದ್ದ ಸಮಾಜದಲ್ಲಿ ಅರಿವಿನ ಬೆಳಕು ಮೂಡಿಸಿದವರು ಬುದ್ಧರು. ಆತ್ಮ, ಪುನರ್ಜನ್ಮಗಳನ್ನು ನಿರಾಕರಿಸಿದರು. ಕರ್ಮಸಿದ್ಧಾಂತವನ್ನು ಒಪ್ಪಿಕೊಳ್ಳಲಿಲ್ಲ. ಬುದ್ಧನ ಧಮ್ಮದಲ್ಲಿ ದೇವರಿಗೆ ಸ್ಥಾನವಿಲ್ಲ, ನೈತಿಕತೆಗೆ ಸ್ಥಾನವಿದೆ ಎಂದು ಹೇಳಿದರು.
ಜಗತ್ತು ನೋವಿನಿಂದ ಕೂಡಿದೆ. ನೋವು ಸಂಕಟಗಳಿಂದ ಪಾರಾಗುವ ಮಧ್ಯಮ ಮಾರ್ಗ ತೋರಿದವರು ಬುದ್ಧ. ಅಷ್ಟಾಂಗ ಮಾರ್ಗಗಳ ಮೂಲಕ ಒಬ್ಬ ಮನುಷ್ಯ ನೆಮ್ಮದಿಯ ಜೀವನ ನಡೆಸಬಹುದು. ಎಲ್ಲ ಕೆಡುಕುಗಳಿಗೆ ಮನಸ್ಸೇ ಕಾರಣ, ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ ಬುದ್ಧರ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ಭಂತೆ ಡಾ. ಶಾಕು ಬೋಧಿಧಮ್ಮ ಮಾತನಾಡಿ, ಶತಮಾನಗಳಿಂದ ಶೋಷಣೆಗೊಳಗಾಗಿರುವ ದಲಿತ ಮತ್ತು ಶೋಷಿತ ಸಮುದಾಯಗಳು ಭಾರತದ ನಿಜವಾದ ಚರಿತ್ರೆಯನ್ನು ಓದಬೇಕು. ಶೋಷಣೆಮುಕ್ತ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ನಮ್ಮ ಮಹಾಪುರುಷರ ಚರಿತ್ರೆಯನ್ನು ತಿಳಿದುಕೊಳ್ಳಬೇಕು. ಇತಿಹಾಸದ ಅರಿವಿಲ್ಲದ ಈ ಸಮುದಾಯಗಳು ಬುದ್ಧ, ಬಸವ, ಫುಲೆ, ಶಾಹು, ಅಂಬೇಡ್ಕರ್ ಕಂಡ ಸಮಸಮಾಜದ ಕನಸನ್ನು ಸಾಕಾರಗೊಳಿಸಬೇಕು. ಬುದ್ಧಭಾರತವನ್ನು ಕಟ್ಟಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬುದ್ಧವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮಾತನಾಡಿ, ಬುದ್ಧವಿಹಾರದಲ್ಲಿ ಧಾರ್ಮಿಕ ಚಟುವಟಿಕೆಗಳು ಮಾತ್ರವಲ್ಲದೆ ಬಡಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅವುಗಳನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲು ಯೋಜಿಸಲಾಗಿದೆ ಎಂದರು.
ಉಪಾಧ್ಯಕ್ಷ ಶಶಿಕಾಂತ ಹೊನವಾಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬುದ್ಧವಿಹಾರ ನಿರ್ಮಾಣ ಮತ್ತು ಅಭಿವೃದ್ಧಿಗೆ ಶ್ರಮಿಸಿದ ಪೀರಪ್ಪ ನಡುವಿನಮನಿ ದಂಪತಿ, ಚಿದಾನಂದ ನಿಂಬಾಳ, ಅಯ್ಯಪ್ಪ ಸಿಂಧೂರ, ಕೃಷ್ಣಪ್ಪ ಬಡಳ್ಳಿ, ಮಲ್ಲಪ್ಪ ಸವನಳ್ಳಿ, ಜಿ.ಬಿ. ಹೆಗಡ್ಯಾಳ ಅವರ ಕುಟುಂಬಸ್ಥರಿಗೆ ಸನ್ಮಾನಿಸಲಾಯಿತು.
ಮೂರು ತಿಂಗಳುಗಳ ಕಾಲ ಬುದ್ಧವಿಹಾರದಲ್ಲಿದ್ದು ವರ್ಷಾವಾಸ ನಡೆಸಿಕೊಟ್ಟ ತೆಲಂಗಾಣದ ಭಂತೆ ಬೋಧಕೀರ್ತಿ ಅವರಿಗೆ ನಿರ್ಮಾಣ ಸಮಿತಿಯ ನಾಗರಾಜ ಲಂಬು, ರಾಜೇಶ ತೊರವಿ, ದಶವಂತ ಗುನ್ನಾಪುರ, ಅಪ್ಪು ನಾಗಠಾಣ, ಆನಂದ ಔದಿ ಅವರು ಚೀವರದಾನ ಮಾಡಿದರು.
ಅಡಿವೆಪ್ಪ ಸಾಲಗಲ್ಲ ಸ್ವಾಗತಿಸಿದರು. ಸಾಬು ಚಲವಾದಿ ವಂದಿಸಿದರು. ಪ್ರತಾಪ ಚಿಕ್ಕಲಕಿ ನಿರೂಪಿಸಿದರು.
ಭಂತೆ ಬೋಧಿ ಆನಂದ, ಭಂತೆ ಬೋಧಿಚಕ್ಷು, ಭಂತೆ ಬೋಧಿದರ್ಪಣ, ಪ್ರಭುಗೌಡ ಪಾಟೀಲ, ಆರ್.ಡಿ. ಸೂಳಿಕೇರಿ, ವಿ.ಎ. ಪಾಟೀಲ, ಸುಧಾಕರ ಕನಮಡಿ, ಭೀಮಶಿ ಹಿಪ್ಪರಗಿ, ಅನಿಲ ಹೊಸಮನಿ, ಎಂ.ಬಿ. ಹಳ್ಳದಮನಿ, ರಮೇಶ ಹಳ್ಳಿ, ಕೆ.ಎಂ. ಶಿವಶರಣ, ಬಿ.ಎಸ್. ಬ್ಯಾಳಿ, ಚಿದಾನಂದ ಹೊನವಾಡಕರ, ಸಿ.ಆರ್. ತೊರವಿ, ಎಸ್.ಎಲ್. ಇಂಗಳೇಶ್ವರ, ಮಡಿವಾಳ ಯಾಳವಾರ, ಸಂಜು ಕಂಬಾಗಿ, ಚೆನ್ನು ಕಟ್ಟಿಮನಿ, ಸೋಮು ರಣದೇವಿ, ಮತಿನಕುಮಾರ ದೇವಧರ, ಸಂತೋಷ ಕಾಂಬಳೆ, ಲೋಹಿತ ಪಾರಣ್ಣವರ, ಉಮೇಶ ಹೆಂಡೆಗಾರ, ಮಣಿಕಂಠ ಸಾಗರ, ಸುಭಾಸ ಜುಮನಾಳ, ನಾಗರಾಜ ಲಿಂಗದಳ್ಳಿ, ದಯಾನಂದ ಹಾಲ್ಯಾಳ, ಶ್ರೀಧರ ಹಾಲ್ಯಾಳ, ಗಣೇಶ ಘಟಕಾಂಬಳೆ, ಸುರೇಶ ಬಬಲೇಶ್ವರ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮನಗೂಳಿ ರಸ್ತೆಯ ಡಾ. ಅಂಬೇಡ್ಕರ್ ಭವನದಿಂದ ಬುದ್ಧವಿಹಾರದವರೆಗೆ ನಡೆದ ಭಗವಾನ ಬುದ್ಧ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗಳ ಭವ್ಯ ರಥಯಾತ್ರೆಗೆ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪುರ, ಪರಶುರಾಮ ಹೊಸಮನಿ ಚಾಲನೆ ನೀಡಿದರು.