ಜಿಲ್ಲೆ

ಮಾನವೀಯತೆ ಸಾರುವ ಬೌದ್ಧ ಧರ್ಮ: ಹೈಕೋರ್ಟ್ ನ್ಯಾಯವಾದಿ ಎಂ.ಬಿ.ಹರಿಪ್ರಸಾದ್ ಹೇಳಿಕೆ

ಮಂಡ್ಯ: ದೇಶದಲ್ಲಿ ಸಾಕಷ್ಟು ಧರ್ಮಗಳು ಹುಟ್ಟಿಕೊಂಡವು. ಆದರೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ರೂಪುಗೊಂಡ ಮಾನವೀಯತೆ ಸಂದೇಶ ಸಾರುವ ಬೌದ್ಧ ಧರ್ಮವು ವಿಶ್ವವ್ಯಾಪ್ತಿಯಾಗಿದೆ. ಅಂತೆಯೇ ಗೌತಮ ಬುದ್ಧರ ಸಂದೇಶ, ಪಂಚಶೀಲ ತತ್ವ ಹಾಗೂ ಅಷ್ಠಾಂಗ ಮಾರ್ಗಗಳು ಮನುಷ್ಯನ ಪ್ರಗತಿಯನ್ನು ಹೆಚ್ಚಿಸುತ್ತದೆ ಎಂದು ಹೈಕೋರ್ಟ್ ನ್ಯಾಯವಾದಿ ಎಂ.ಬಿ.ಹರಿಪ್ರಸಾದ್ ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ಎವಿಎಸ್‌ಎಸ್ ಬ್ಯಾಂಕ್ ಕಚೇರಿಯಲ್ಲಿ ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘದ ಮಂಡ್ಯ ತಾಲೂಕು ಶಾಖೆಯಿಂದ ಆಯೋಜಿಸಿದ್ದ ಬುದ್ಧ ಜಯಂತಿ ಮತ್ತು ಬುದ್ಧ ಪೂರ್ಣಿಮೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮ ವಿಶ್ವಕ್ಕೆ ಪಸರಿಸಿದೆ. ಇದನ್ನು ಅನುಸರಿಸಿ ಸಮಾನತೆಯಿಂದ ಪ್ರಗತಿ ಸಾಧಿಸುತ್ತಿದ್ದಾರೆ ಎಂದರು.

ಬೌದ್ಧ ಧರ್ಮಕ್ಕೆ ಮರುಹುಟ್ಟು ನೀಡಿದ್ದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಎಂಬುದನ್ನು ಜನತೆ ಮರಿಬಾರದು. ಅಂಬೇಡ್ಕರ್ ಅವರ ಪರಿಶ್ರಮದಿಂದ ಬೌದ್ಧ ಧರ್ಮ ಮತ್ತಷ್ಟು ಬೆಳೆಯಲು, ಬುದ್ಧರ ತತ್ವ ಸಂದೇಶಗಳು ವಿಶ್ವಕ್ಕೆ ಪಸರಿಸಲು ಸಾಧ್ಯವಾಯಿತು. ಆದರೆ ಭಾರತದಲ್ಲಿ ಬೌದ್ಧ ಧರ್ಮದ ಅನುಯಾಯಿ, ಉಪಾಸಕರು ಮತ್ತಷ್ಟು ಪ್ರಚುರ ಪಡಿಸಬೇಕಿದೆ ಎಂದು ಹೇಳಿದರು.

ಭಾರತದಲ್ಲಿ ಅಸಮಾನತೆ, ಜಾತಿ ನಿಂದನೆ, ದೌರ್ಜನ್ಯಗಳಿಂದ ಮುಕ್ತಗೊಳ್ಳಲು ಬೌದ್ಧ ಧರ್ಮವನ್ನು ಜನತೆ ಅಪ್ಪಿಕೊಳ್ಳಬೇಕು. ಸಮಾನತೆ ಮತ್ತು ನೆಮ್ಮದಿಯಿಂದ ಜೀವನ ನಡೆಸಲು ಪಂಚಶೀಲ ಹಾಗೂ ಅಷ್ಟಾಂಗಮಾರ್ಗ ಅನುಸರಿಸಬೇಕು. ಅಸಮಾನತೆಯಿಂದ ಸಮಾನತೆಯೆಡೆಗೆ ಸಾಗುವುದು. ಮೌಢ್ಯತೆಯಿಂದ ವೈಜ್ಞಾನಿಕ ಬೆಳಕಿನೆಡೆಗೆ ಸಾಗಿ, ನೆಮ್ಮದಿ ಜೀವನ ನಡೆಸಲು ಪ್ರಬುದ್ಧರಾಗುವುದು, ಆರ್ಥಿಕವಾಗಿ ಸಬಲೀಕರಣಗೊಳ್ಳುವುದು ಬೌದ್ಧ ಧರ್ಮದಲ್ಲಿ ಸಾಧ್ಯವಿದೆ ಎಂದರು.

ಸಂಘದ ಪದಾಧಿಕಾರಿಗಳಾದ ಆಟೋ ಗುರುಶಂಕರ್, ಹೊಳಲು ಜಯಶಂಕರ್, ಕುಮಾರಸ್ವಾಮಿ, ರಾಜೇಶ್, ಶಿವಲಿಂಗಯ್ಯ ಇತರರಿದ್ದರು.