ಸಿರಗುಪ್ಪ: ಒತ್ತಡಕ್ಕೆ ಒಳಗಾದಾಗ ತಾಳ್ಮೆ ಕಳೆದುಕೊಳ್ಳದಿದ್ದರೆ ಶಾಂತಿ ತಾನಾಗಿಯೇ ಬರುತ್ತದೆ ಎಂದು ತಹಸೀಲ್ದಾರ್ ಶಂಶಾಲಂ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಹಾಗೂ ದಲಿತ ವಿದ್ಯಾರ್ಥಿಗಳ ಒಕ್ಕೂಟ ತಾಲೂಕು ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬುದ್ಧನ ತತ್ವಗಳನ್ನು ಆಚರಿಸಿ ಎಂದು ಹೇಳುವುದಕ್ಕಿಂತ ಮೊದಲು ನಮ್ಮೊಳಗಿನ ಬುದ್ಧನನ್ನು ಎಚ್ಚರಿಸಿದಲ್ಲಿ ಶಾಂತಿ ಸಿಗುತ್ತದೆ. ಬುದ್ಧನ ಹಾದಿ ತುಳಿದರೆ ನಮ್ಮ ಜೀವನವನ್ನು ಪ್ರಜ್ವಲಗೊಳಿಸಿಕೊಳ್ಳಬಹದು ಎಂದರು.
ಇದನ್ನು ಓದಿ: ಬುದ್ಧ ಪೂರ್ಣಿಮಾ; ಮಾಂಸ ಮಾರಾಟ ನಿಷೇಧ
ದಸಂಸ ಜಿಲ್ಲಾ ಸಂಚಾಲಕ ಎಚ್.ಬಿ.ಗಂಗಪ್ಪ ಮಾತನಾಡಿ, ಆಸೆಯೇ ದುಃಖಕ್ಕೆ ಮೂಲ ಎಂದ ಭಗವಾನ್ ಬುದ್ಧ ಆಸೆಯನ್ನು ಬಿಟ್ಟರೆ ಮಾತ್ರ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಸಾರಿದರು.
ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ನೆಮ್ಮದಿ ಕಾಣಬಹುದು. ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ಬದುಕು ನಮ್ಮೆಲ್ಲರಿಗೆ ದಾರಿ ದೀಪವಾಗಿದೆ. ಶಿಕ್ಷಣದಿಂದ ಮಾತ್ರ ಉನ್ನತವಾದ ಸ್ಥಾನಮಾನ ಪಡೆಯಲು ಸಾಧ್ಯ.
ಕಾಯಕ, ಶಿಕ್ಷಣ, ಸಂಘಟನೆಯ ಮೂಲಕ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದರು. ಸಂಘಟನೆ ಸಂಚಾಲಕರಾದ ಬಿ.ಹನುಮೇಶ, ಡಿ.ಮೂಕಪ್ಪ, ಪ್ರಮುಖರಾದ ಇ.ಚಿದಾನಂದ ಉಡೇಗೋಳ, ಬ್ರಹ್ಮ, ಚಿದಾನಂದಪ್ಪ, ಕೃಷ್ಣಪ್ಪ, ರಾಮಣ್ಣ, ರವಿಕುಮಾರ್ ಇತರರಿದ್ದರು.