ಜಿಲ್ಲೆ

ಬುದ್ಧ, ಅಂಬೇಡ್ಕರ್ ಅವರು ಕಾಲಾತೀತ ಸ್ಮತಿಗಳು: ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ

ಮೈಸೂರು: ಬುದ್ಧ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಮಕಾಲೀನಗೊಳಿಸಿ ಬೆಳಕು ತೋರುವಲ್ಲಿ ನಾವು ಹಿಂದೆ ಉಳಿದಿದ್ದೇವೆ ಎಂದು ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಬೇಸರ ವ್ಯಕ್ತಪಡಿಸಿದರು.

ವಿಶ್ವಮೈತ್ರಿ ಬುದ್ಧವಿಹಾರ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಂಶೋಧನೆ ಸಂಘದಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಧಮ್ಮಂ ನಮಾಮಿ ನವ ಯುವ ಯಾನ’ ಅಂಬೇಡ್ಕರ್‌ವಾದಿಗಳು ಮತ್ತು ಬೌದ್ಧ ಅನುಯಾಯಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ತೋರಿಸಿದ ಎಚ್ಚರದಲ್ಲಿ ಬುದ್ಧನನ್ನು ಒಳಗೆ ತೆಗೆದುಕೊಂಡಿದ್ದೇವೆ. ಬುದ್ಧ ಹಾಗೂ ಅಂಬೇಡ್ಕರ್ ಅವರು ಕಾಲಾತೀತ ಸ್ಮತಿಯಾಗಿದ್ದಾರೆ. ಅವರನ್ನು ಆರಾಧನೆಯಿಂದ ಅನುಸರಣೆಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಅಶೋಕನ ಕಾಲದಲ್ಲಿ ಇದ್ದ ಬೌದ್ಧಧರ್ಮ ಭಾರತದಲ್ಲಿ ಮತ್ತೆ ಮರಳಿಸುವ ದೀಕ್ಷೆಯನ್ನು ಅಂಬೇಡ್ಕರ್ ತೆಗೆದುಕೊಂಡಿದ್ದರು. ತಾವು ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ನವಯಾನ ಮಾರ್ಗವನ್ನು ತೋರಿದರು. ಆದರೆ ಬುದ್ಧ -ಅಂಬೇಡ್ಕರ್ ಅವರ ಬೆಳಕು ಜನರಿಗೆ ತಾಕಿಲ್ಲ. ಅವರನ್ನು ಸಮಕಾಲೀನಗೊಳಿಸುವಲ್ಲಿ ನಾವು ಹಿಂದೆ ಉಳಿದಿದ್ದೇವೆ ಎಂದು ಹೇಳಿದರು.

ಬೌದ್ಧ ಧರ್ಮಗುರುಗಳಾದ ಬಂತೆ ಮಾತೆ ಗೌತಮಿ, ಸುಗತಪಾಲ ಭಂತೇಜಿ, ಮಾಜಿ ಮೇಯರ್ ಪುರುಷೋತ್ತಮ್, ಆಯೋಜಕರಾದ ಪುಟ್ಟಮಣಿ ದೇವಿದಾಸ್, ರಮಾ ಸಿದ್ದಲಿಂಗಯ್ಯ, ಹೊಂಗಯ್ಯ, ನಾಗಮಣಿ, ಸೋಮಯ್ಯ ಮಲೆಯೂರು ಇತರರು ಇದ್ದರು.