ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ರಾಘಘಟ್ಟ ಗ್ರಾಮದ ಬೂದಿಗುಂಡಿಯಲ್ಲಿ ನವೆಂಬರ್ ಮೊದಲ ವಾರದಿಂದ ಅಧಿಕೃತವಾಗಿ ಉತ್ಖನನ ಆರಂಭಿಸಲು ಪುರಾತತ್ವ ಇಲಾಖೆ ಸರ್ವಸಿದ್ದತೆಯಲ್ಲಿದೆ.
ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಜಂಟಿಯಾಗಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಮುಂದಾಗಿದೆ. ಜು.16ರಂದು ಉತ್ಖನನ ಕಾರ್ಯಕ್ರಮ ಉದ್ಘಾಟನೆಯಾಗಿದ್ದು ಪ್ರಸ್ತುತ ಮಳೆ ಕಾರಣದಿಂದ ಉತ್ಖನನ ಕಾರ್ಯ ಮುಂದೂಡಲಾಗಿದೆ. ನವೆಂಬರ್‌ನಲ್ಲಿ ಆರಂಭಿಸಿ ಸುಮಾರು ಎರಡೂವರೆ ತಿಂಗಳಿಂದ ಮೂರು ತಿಂಗಳ ಅವಧಿಯೊಳಗೆ ಉತ್ಖನನ ಕಾರ್ಯ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತವಾಗಿದೆ.
ಈಗಾಗಲೇ ಹಲವು ಐತಿಹಾಸಿನ ತಾಣಗಳಿಂದ ದೇಶದ ಗಮನ ಸೆಳೆದಿರುವ ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಬೌದ್ಧರ ಇತಿಹಾಸದ ಗತವೈಭವವನ್ನು ಬೆಳೆಕಿಗೆ ತರುವ ಪ್ರಯತ್ನ ಇದಾಗಿದ್ದು ಇಲಾಖೆಗಳಿಂದ ಉತ್ಖನನದ ನೀಲಿನಕ್ಷೆ ಸಿದ್ದವಾಗಿದೆ. ಯೋಜಿತ ರೂಪದಲ್ಲಿ ಕಾರ್ಯ ಆರಂಭವಾಗಲಿದ್ದು, ಇದಕ್ಕಾಗಿ ಸ್ಥಳೀಯವಾಗಿ ನರೇಗಾ ಕೂಲಿಕಾರ್ಮಿಕರನ್ನು ಬಳಸಲು ಸಿದ್ದತೆ ನಡೆದಿದೆ.
ಜಮೀನು ಮಾಲೀಕರೊಂದಿಗೆ ಒಪ್ಪಂದ: ಉತ್ಖನನಕ್ಕೆ ಗುರುತಿಸಿರುವ ಜಮೀನಿನ ಮಾಲೀಕರೊಂದಿಗೆ ಪುರಾತತ್ವ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು ಉತ್ಖನನಕ್ಕೆ ಅನುಮತಿ ಪಡೆಯಲಾಗಿದೆ. ಉತ್ಖನನ ಪೂರ್ಣಗೊಂಡ ಬಳಿಕ ಭೂಮಿಯ ಹಕ್ಕು ಜಮೀನಿನ ಮಾಲೀಕರಿಗೆ ಸೇರಲಿದೆ ಎನ್ನಲಾಗಿದ್ದು ಈ ಬಗ್ಗೆ ಇಲಾಖೆ ಲಿಖಿತ ಒಪ್ಪಂದ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಜಿತ ಅವಧಿಯಲ್ಲಿ ಉತ್ಖನನ ಪೂರ್ಣಗೊಳ್ಳದೆ ಮುಂದುವರೆಸಬೇಕಾದ ಪರಿಸ್ಥಿತಿ ಎದುರಾದರೆ ಅದಕ್ಕೂ ಅನುಮತಿ ಪಡೆದು ಕಾರ್ಯ ಮುಂದುವರೆಸುವ ಕೆಲಸ ಮಾಡಲಾಗುವುದು, ಒಂದು ವೇಳೆ ಉತ್ಖನನ ವೇಳೆ ಗುರುತಿಸಿರುವ ಜಮೀನಿನಲ್ಲಿ ಯಾವುದಾದರೂ ಬೆಳೆ ಇದ್ದರೆ ಅದಕ್ಕೆ ಪರಿಹಾರ ನೀಡುವ ಸಂಬಂಧ ಲಿಖಿತ ಭರವಸೆ ನೀಡಲಾಗಿದೆ. ಯಾವುದೇ ಅಡೆತಡೆಗಳಿಗೆ ಅವಕಾಶವಿಲ್ಲದೆ ಉತ್ಖನನ ಕಾರ್ಯ ಪೂರ್ಣಗೊಳಿಸುವ ವಿಶ್ವಾಸ ಇಲಾಖೆಯದ್ದಾಗಿದೆ.
2500 ವರ್ಷಗಳ ಇತಿಹಾಸ: ಸುಮಾರು 2500 ವರ್ಷಗಳ ಹಿಂದಿನ ಇತಿಹಾಸ ಕೆದಕುವ ಪ್ರಯತ್ನ ನಡೆಯಲಿದೆ, 2004ರಲ್ಲಿ ಮೊದಲ ಬಾರಿಗೆ ಉತ್ಖನನಕ್ಕೆ ಚಾಲನೆ ನೀಡಲಾಯಿತು. ಆಗ ಕೆಲವೊಂದು ಭೌದ್ಧ ಪ್ರತಿಮೆಗಳು, ಸ್ಥೂಪಗಳು, ಚಿನ್ನದನಾಣ್ಯ, ಶಿವಲಿಂಗ. ಶಿಲಾಶಾಸನಗಳು ಸೇರಿ ಹಲವು ಪುರಾವೆಗಳು ಪತ್ತೆಯಾಗಿದ್ದವು. ಇಲಾಖೆ ಗುರುತಿಸಿರುವ ಜಾಗದಲ್ಲಿ ಬೌದ್ಧವಿಹಾರವಿರುವ ಬಗ್ಗೆ ಊಹಿಸಲಾಗಿದ್ದು, ಉತ್ಖನನ ಆರಂಭವಾದ ಬಳಿಕ ಹೊಸ ಅಚ್ಚರಿಗಳನ್ನು ಕಾಣಬಹುದು ಎಂಬ ವಿಶ್ವಾಸ ವ್ಯಕ್ತವಾಗಿದೆ.
ಸೂಕ್ಷ್ಮ ಕೆಲಸ: ಬೂದಿಗುಂಡಿಯಲ್ಲಿ ಉತ್ಖನನ ಮಾಡುವುದು ಅತೀ ಸೂಕ್ಷ್ಮ ಕೆಲಸವಾಗಿದ್ದು, ಯಾವುದೇ ಯಂತ್ರೋಪಕರಣಗಳನ್ನು ಬಳಸದೆ ಮಾನವಶಕ್ತಿ ಮೂಲಕ ಕೆಲಸ ಮಾಡಬೇಕಾಗಿದೆ, ಯಾವುದೇ ಐತಿಹಾಸಿಕ ಕುರುಹುಗಳು, ವಸ್ತುಗಳಿಗೆ ಧಕ್ಕೆಯಾಗದಂತೆ ನಿರ್ವಹಿಸುವುದು ಸವಾಲಿನ ಕೆಲಸವಾಗಿದ್ದು ಎಲ್ಲದಕ್ಕೂ ಇಲಾಖೆ ಸಿದ್ದವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮ್ಯೂಸಿಯಂಗೆ ರವಾನೆ: ಈ ಹಿಂದೆ ಉತ್ಖನನದ ವೇಳೆ ದೊರೆತ ವಸ್ತುಗಳನ್ನು ಮೈಸೂರಿನ ವಸ್ತುಸಂಗ್ರಹಾಲಯಕ್ಕೆ ರವಾನಿಸಿದ್ದು ಅಲ್ಲಿ ಅವುಗಳನ್ನು ಸಂರಕ್ಷಿಸಲಾಗಿದೆ, ಈ ಬಾರಿ ಉತ್ಖನನದ ವೇಳೆ ದೊರೆಯುವ ಅಪರೂಪದ ವಸ್ತುಗಳನ್ನು ಬೆಂಗಳೂರಿನ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಹರಪ್ಪ ಮಹೆಂಜೋದಾರೋ, ತಲಕಾಡು ಸೇರಿ ಅನೇಕ ಐತಿಹಾಸಿಕ ವಸ್ತುಗಳನ್ನು ಸಂಕ್ಷಿಸಲಾಗಿದ್ದು ಇವುಗಳ ಸಾಲಿಗೆ ರಾಜಘಟ್ಟದ ಬೌದ್ಧನೆಲೆಯೂ ಸೇರಲಿದೆ.
ಕೇಂದ್ರ ಸರ್ಕಾರದ ಅನುಮತಿ ಬಳಿಕ ಜು.16ರಂದು ಬೌದ್ಧನೆಲೆ ಉತ್ಖನನ ಕಾರ್ಯಕ್ರಮ ಉದ್ಘಾಟಿಸಲಾಗಿದೆ. ಮಳೆಕಾರಣದಿಂದ ನವೆಂಬರ್ ಮೊದಲ ವಾರದಿಂದ ಅಧಿಕೃತವಾಗಿ ಉತ್ಖನನ ಕಾರ್ಯ ಆರಂಭವಾಗಲಿದೆ. ಸುಮಾರು 2ರಿಂದ 3 ತಿಂಗಳ ಅವಧಿಯಲ್ಲಿ ಉತ್ಖನನ ಪೂರ್ಣಗೊಳಿಸುವ ಯೋಜನೆ ಇದೆ. ಇದೊಂದು ಸೂಕ್ಷ್ಮ ಕೆಲಸವಾಗಿರುವುದರಿಂದ ಕೇವಲ ಮಾನವ ಶಕ್ತಿ ಬಳಸಿ ಕಾರ್ಯ ನಡೆಸಬೇಕಿದೆ. ಯಾವುದೇ ವಸ್ತುಗಳಿಗೆ ಸಣ್ಣ ಹಾನಿಯಾಗದಂದೆ ಉತ್ಖನನ ನಡೆಸಬೇಕಾದ ಸವಾಲಿಗೆ ಇಲಾಖೆ ಸರ್ವ ಸಿದ್ದತೆ ನಡೆಸಿದೆ.
ಕಾವ್ಯಶ್ರೀ, ಉಪನಿರ್ದೇಶಕಿ ಪುರಾತತ್ವ ಇಲಾಖೆ ಬೆಂ.ಗ್ರಾಮಾಂತರ