ಮಂಡ್ಯ: ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಮಂಜೂರಾಗಿರುವ ಭೂಮಿಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿರುವ ವ್ಯಾಜ್ಯವನ್ನು ಇತ್ಯರ್ಥಪಡಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿ ತಾಲೂಕಿನ ಬೂದನೂರು ಸ್ವಂತ ಮನೆ ನಮ್ಮ ಹಕ್ಕು ಸಮಿತಿ ಕಾರ್ಯಕರ್ತರು ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟಿಸಿದರು.
ತಾಲೂಕು ಕಚೇರಿ ಎದುರು ಸಮಿತಿಯ ಕಾರ್ಯಕರ್ತರು ಮೈಮೇಲೆ ಸಗಣಿ ಸುರಿದುಕೊಂಡು ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೂದನೂರು ನಿವೇಶನರಹಿತರಿಗೆ ಮಂಜೂರಾದ ಭೂಮಿಗೆ ಸಂಬಂಧಿಸಿದ ವ್ಯಾಜ್ಯವನ್ನು ಅಧಿಕಾರಿಗಳು ಬಗೆಹರಿಸುವ ಬದಲು ಭೂಗಳ್ಳರ ಜತೆ ಸೇರಿ ವಂಚನೆ ಮಾಡುತ್ತಿದ್ದಾರೆ. ಇದಲ್ಲದೆ ವ್ಯಾಜ್ಯವನ್ನು ಇತ್ಯರ್ಥಪಡಿಸಲು ತುರ್ತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಶಾಸಕರು ಸೂಚನೆ ನೀಡಿದ್ದರೂ, ಸಬೂಬೂ ಹೇಳುತ್ತಾ ಭೂಗಳ್ಳರ ನೆರವಿಗೆ ನಿಂತಿದ್ದಾರೆ ಎಂದು ಆರೋಪಿಸಿದರು.
ವ್ಯಾಜ್ಯಗಳ ಕುರಿತು ತಪ್ಪು ಮಾಹಿತಿ ನೀಡಿರುವ ಭೂಗಳ್ಳರ ವಿರುದ್ದ ನ್ಯಾಯಾಲಯಕ್ಕೆ ಸರಿಯಾದ ವಿವರ ನೀಡುವಂತೆ ಮನವಿ ಮಾಡಲಾಗಿದೆ. ಆದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಈ ಮೂಲಕ ದಲಿತ ಕುಟುಂಬಗಳಿಗೆ ಭೂಮಿ ಸಿಗದಂತೆ ಸಂಚು ಮಾಡುತ್ತಿದ್ದಾರೆ. ಮಾತ್ರವಲ್ಲದೆ ಸರ್ಕಾರಿ ಭೂಮಿ ಲಪಟಾಯಿಸಲು ಕೆಲವರು ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದಾರೆ. ಇವರಿಗೆ ಅಧಿಕಾರಿಗಳು ನೆರವು ನೀಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಸದಸ್ಯರಾದ ಕುಳ್ಳ, ಬೂದನೂರು ಸತೀಶ್, ಸಮಿತಿಯ ಸರೋಜಮ್ಮ, ವಿಜಯ, ಕನಕ, ಕರಿಯಪ್ಪ ಇತರರಿದ್ದರು.