ಮಂಡ್ಯ: ತಾಲೂಕಿನ ಬೂದನೂರು ಗ್ರಾಮದ ಕಾಶಿವಿಶ್ವನಾಥ ದೇವಾಲಯದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನದ ಬೂದನೂರು ಉತ್ಸವ ಭಾನುವಾರ ರಾತ್ರಿ ತೆರೆಕಂಡಿತು.
ಉತ್ಸವದ ಹಿನ್ನೆಲೆಯಲ್ಲಿ ಕಾಶಿವಿಶ್ವನಾಥಸ್ವಾಮಿ ಹಾಗೂ ಅನಂತಪದ್ಮನಾಭಸ್ವಾಮಿ ದೇವಸ್ಥಾನಗಳಿಗೆ ವರ್ಣಮಯ ದೀಪಾಲಂಕಾರ ಮಾಡಲಾಗಿತ್ತು. ದೇವಾಲಯಗಳ ಆವರಣಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಗ್ರಾಮಗಳ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಿ ಮನೆಗಳ ಮುಂಭಾಗ ಬಣ್ಣ ಬಣ್ಣದ ರಂಗೋಲಿಯನ್ನು ಬಿಟ್ಟು ಸಂಭ್ರಮಿಸಿದರು. ಉತ್ಸವಕ್ಕೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಬೆಳಗ್ಗೆಯಿಂದ ಸಂಜೆವರೆಗೂ ಇತಿಹಾಸ ಪ್ರಸಿದ್ಧ ಎರಡೂ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸಮಾರೋಪ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಪ್ರಸ್ತುತ ಬರಗಾಲ ಎದುರಿಸುತ್ತಿದ್ದು, ಯುಗಾದಿ ನಂತರ ಮಳೆ-ಬೆಳೆಯಾಗಲು ದೇವರು ಆಶೀರ್ವಾದ ಮಾಡಲೆಂದು ಪ್ರಾರ್ಥಿಸುತ್ತೇನೆ. ನಮ್ಮ ಸರ್ಕಾರ ರೈತರ ಬಹಳ ವರ್ಷಗಳ ಕನಸಾದ ಹೊಸ ಮೈಷುಗರ್ ಕಾರ್ಖಾನೆಯನ್ನು ಸ್ಥಾಪಿಸುವುದರ ಜತೆಗೆ ವಿ.ಸಿ ಫಾರ್ಮ್‌ನಲ್ಲಿ ಕೃಷಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ, ಇನ್ನೂ ಹಲವಾರು ಜನಪರ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ನೀಡುತ್ತಿದೆ. ಜನತೆಯ ಸಹಕಾರ ಸದಾ ನಮ್ಮ ಮೇಲೆ ಇರಲಿ ಎಂದು ಆಶಿಸಿದರು.
ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಬೂದನೂರು ಉತ್ಸವ ನೆಪದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ನಾಡಿಗೆ ಪ್ರಚಾರ ಮಾಡಲಾಗುತ್ತಿದೆ. ಗಗನಚುಕ್ಕಿ, ಕೊಕ್ಕರೆ ಬೆಳ್ಳೂರು, ಶ್ರೀರಂಗಪಟ್ಟಣದ ಪಕ್ಷಿಧಾಮ ಸೇರಿದಂತೆ ಐತಿಹಾಸಿಕ ದೇವಾಲಯಗಳ ಮೆರಗನ್ನು ಪ್ರವಾಸಿಗರಿಗೆ ಉಣಬಡಿಸಿ ಆ ಮೂಲಕ ಉದ್ಯೋಗ, ವ್ಯಾಪಾರ ವಹಿವಾಟು ಅಭಿವೃದ್ಧಿಗೆ ನಾಂದಿ ಆಡಬೇಕು ಎಂದರು.
ಶಾಸಕ ರವಿಕುಮಾರ್ ಮಾತನಾಡಿ, ಈ ವರ್ಷ ಉತ್ಸವ ಪ್ರಾರಂಭವಾಗಿದ್ದು, ಮುಂದೆ ನಿರಂತರವಾಗಿ ನಡೆಯಲಿದೆ. ಕಾಶಿ ವಿಶ್ವನಾಥಸ್ವಾಮಿ, ಅನಂತಪದ್ಮನಾಭ ಸ್ವಾಮಿ ದೇವಾಲಯಗಳನ್ನು ಪರಿಚಯಿಸಲು ಈ ಉತ್ಸವ ಆರಂಭಿಸಿದ್ದು, ಕಾಲಕ್ರಮೇಣ ಪ್ರವಾಸಿ ತಾಣವಾಗಿ ಬದಲಾಗಲಿದೆ. ಬೂದನೂರಿನ ಆರ್ಥಿಕಾಭಿವೃದ್ಧಿ ಸಹ ಹೆಚ್ಚಾಗಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಉದ್ಯಮಿ ರವಿ ಭೋಜೇಗೌಡ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಸ್ಟಾರ್ ಚಂದ್ರು(ವೆಂಕಟರಮಣೇಗೌಡ), ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ್, ಗ್ರಾಪಂ ಅಧ್ಯಕ್ಷೆ ಮಾನಸಾ, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯ ಕೆಂಪೇಗೌಡ ಇತರರಿದ್ದರು.
ಇದೇ ಸಂದರ್ಭದಲ್ಲಿ ನಮ್ಮ ಮನೆ ನಮ್ಮ ಹಕ್ಕು ಸಂಘದ ಆಶ್ರಯದಲ್ಲಿ ಹೋರಾಟ ಮಾಡುತ್ತಿದ್ದ ಸುಮಾರು 27 ಜನರಿಗೆ ರಾಜೀವ್ ಗಾಂಧಿ ವಸತಿ ನಿಗಮದಡಿ ಹಕ್ಕು ಪತ್ರ ವಿತರಿಸಲಾಯಿತು. ಈ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಶಾಸಕ ರವಿಕುಮಾರ್ ಗಣಿಗ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಲಾಯಿತು.