ಜಿಲ್ಲೆ

ಬುಗಡನಹಳ್ಳಿ ಕೆರೆಗೆ ಹರಿದ ಹೇಮಾವತಿ

Tumakuru

ತುಮಕೂರು: ಸ್ಮಾರ್ಟ್‌ಸಿಟಿ ಕುಡಿಯುವ ನೀರಿನ ದಾಹ ನೀಗಿಸುವ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಸೋಮವಾರ ಬೆಳಗ್ಗೆ ಹೇಮೆ ನೀರು ಹರಿದಿದೆ.ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ತುಮಕೂರು ನಗರವಾಸಿಗಳು ಸಮಾಧಾನಗೊಂಡಿದ್ದು ಮುಂದಿನ 10 ರಿಂದ 15 ದಿನದಲ್ಲಿ ಕೆರೆ ಭರ್ತಿಯಾಗುವ ಸಾಧ್ಯತೆ ಇದೆ.

ಹಾಸನ ಜಿಲ್ಲೆ ಗೊರೂರು ಹೇಮಾವತಿ ಜಲಾಶಯದಿಂದ ತುಮಕೂರು ನಾಲೆಗೆ 2000 ಕ್ಯುಸೆಕ್ ನೀರು ಬಿಡಲಾಗಿದ್ದು ತುಮಕೂರು ಜಿಲ್ಲೆಯ ತುರುವೇಕೆರೆ ಬಳಿ ಜಿಲ್ಲೆಯ ನಾಲೆ ಪ್ರವೇಶಿಸುವ ಹೊತ್ತಿಗೆ 1200 ಕ್ಯುಸೆಕ್ ಪ್ರಮಾಣದಷ್ಟು ನೀರು ಹರಿಯುತ್ತಿದೆ. ಬುಗಡನ ಹಳ್ಳಿ ಜಲಸಂಗ್ರಹಾಗಾರದವರೆಗೆ ತುಮಕೂರು ಬ್ರಾಂಚ್ ಕೆನಾಲ್ 124 ಕಿಲೋ ಮೀಟರ್ ಉದ್ದವಿದ್ದು, 4 ದಿನದಲ್ಲಿಯೇ ಹೇಮಾವತಿ ನೀರು ತಲುಪಿದೆ. ಸೋಮವಾರ ಬೆಳಗ್ಗೆ 400 ಕ್ಯೂಸೆಕ್ ಇದ್ದ ನೀರಿನ ಪ್ರಮಾಣ ಸಂಜೆ ವೇಳೆಗೆ 550 ಕ್ಯೂಸೆಕ್ ದಾಖಲಾಯಿತು.

ಬುಗಡನಹಳ್ಳಿ ಕೆರೆ ತುಂಬಲು 10 ದಿನ: ತುರುವೇಕೆರೆಯಲ್ಲಿ ಹೇಮಾವತಿ ನಾಲೆಯಲ್ಲಿ 1200ಕ್ಕೂ ಕ್ಯುಸೆಕ್‌ನಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಆದರೆ, ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ550 ಕ್ಯುಸೆಕ್ ಪ್ರಮಾಣದ ನೀರು ಹರಿಯಲಿದ್ದು, 0.24 ಟಿಎಂಸಿ ಸಾಮರ್ಥ್ಯವುಳ್ಳ ಜಲಸಂಗ್ರಹಾಗಾರ ತುಂಬಲು 10 ದಿನಗಳು ಸಾಕಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮೊದಲಿಗೆ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ನೀರು ತುಂಬಿಸಲು ಆದ್ಯತೆ ಕೊಡಲಾಗಿದೆ. ನಂತರ ಪಾವಗಡ ಹೊರತುಪಡಿಸಿ ಉಳಿದ 9 ತಾಲೂಕು ಕೇಂದ್ರಗಳಲ್ಲಿ ಕುಡಿಯುವ ನೀರಿನ ಯೋಜನೆಯಲ್ಲಿನ ಕೆರೆಗಳಿಗೆ ನೀರು ಹರಿಸಲು ಹೇಮಾವತಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ತುಮಕೂರು ನಗರಕ್ಕೆ ಪ್ರತಿನಿತ್ಯ 57 ಎಂಎಲ್‌ಡಿ ನೀರಿನ ಅಗತ್ಯವಿದೆ. ಮಳೆ ಇಲ್ಲದೆ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ. ನಗರದ ಹೊರವಲಯಗಳ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಆರಂಭವಾಗಿತ್ತು. ಜಿಲ್ಲೆಯ ವಿವಿಧ ಭಾಗದಲ್ಲಿರುವ 40 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಹರಿಸಿ ಯಾವುದೇ ಕಾರಣಕ್ಕು ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗದಂತೆ ಕ್ರಮವಹಿಸಬೇಕಿದೆ. ಬುಗಡನಹಳ್ಳಿ  ಕೆರೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭೇಟಿ ನೀಡಿ ಪರಿಶೀಲಿಸಿದರು.

ಆದ್ಯತೆ ಮೇರೆಗೆ ಶಿರಾಗೆ ಹೇಮೆ ನೀರು ಹರಿಸಿ : ಶಿರಾ: ಜಿಲ್ಲೆಗೆ ಶನಿವಾರದಿಂದ ಹೇವಾವತಿ ನೀರು ಹರಿಸುತ್ತಿದ್ದು, ಕುಡಿಯುವ ಉದ್ದೇಶಕ್ಕಾಗಿ ಶಿರಾ ನಾಲೆಗೆ ಆದ್ಯತೆ ಮೆರೆಗೆ ನೀರು ಹರಿಸಬೇಕು ಎಂದು ವಾಜಿ ಸಚಿವ ಟಿ.ಬಿ.ಜಯಚಂದ್ರ

ಒತ್ತಾಯಿಸಿದರು. ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏಪ್ರಿಲ್ ಆರಂಭದಲ್ಲೇ ನಾಲೆಗೆ ನೀರು ಹರಿಸಿದ್ದರೆ ಈ ವೇಳೆಗೆ ಎಲ್ಲ ಭಾಗಗಳಿಗೆ ನೀರು ಹರಿಸಲು ಅನುಕೂಲ ಆಗುತ್ತಿತ್ತು. ಆದರೆ, 2 ತಿಂಗಳು ವಿಳಂಬವಾಗಿ ನೀರು ಹರಿಸಲಾಗಿದೆ. ಇದು ಸರ್ಕಾರ ಯಾವ ರೀತಿ ಕೆಲಸ ನಿರ್ವಹಿಸುತ್ತಿದೆ ಎನ್ನುವುದಕ್ಕೆ ಉದಾಹರಣೆ ಎಂದು ವ್ಯಂಗ್ಯವಾಡಿದರು.

ಮದಲೂರು ಕೆರೆಗೆ ನೀರು ಹರಿಸುವ ಬಗ್ಗೆ ವಾತನಾಡಿದ ಜಯಚಂದ್ರ, ಮಂತ್ರಿಯಾದವರಿಗೆ ಆದೇಶ ಇರುವ ಬಗ್ಗೆಯೇ ವಾಹಿತಿ ಇಲ್ಲ. ಪ್ರತಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಶಿರಾ ಪ್ರದೇಶದಲ್ಲಿ ಮಳೆ ನಿರೀಕ್ಷಿಸಬಹುದು. ಅಲ್ಲಿಯವರೆಗೆ ಕುಡಿಯುವ ನೀರಿಗೆ ನಾವು ಹೇವಾವತಿ ನೀರು ಅವಲಂಬಿತವಾಗಬೇಕಿದೆ. ಆದ್ದರಿಂದ ಆದ್ಯತೆ ಮೇರೆಗೆ ಶಿರಾಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ತುಮಕೂರು ನಗರದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲೆಗೆ ಸಕಾಲದಲ್ಲಿ ನೀರು ಹರಿಸಲು ಸಹಕಾರ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಜಿಲ್ಲೆಯ ಪರವಾಗಿ ಅಭಿನಂದಿಸುತ್ತೇನೆ. ಜಿ.ಬಿ.ಜ್ಯೋತಿಗಣೇಶ್ ಶಾಸಕ